ಕಾರವಾರ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ‘ಪಿಂಕ್ ಬಬಲ್’ ಆಸನ ವ್ಯವಸ್ಥೆ ಉದ್ಘಾಟನೆ; ಮಡಗಾಂವ್-ಕಾರವಾರ ರೈಲು ಸೇವೆ ಖಾಯಂ
ದಾಂಡೇಲಿ (ಉತ್ತರ ಕನ್ನಡ): ಮಹಿಳಾ ಪ್ರಯಾಣಿಕರ ಸುರಕ್ಷತೆ, ಗೌಪ್ಯತೆ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕಾರವಾರ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಪಿಂಕ್ ಬಬಲ್’ (Pink Bubble) ವಿಶ್ರಾಂತಿ ಆಸನ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಸುಮಾರು ₹1 ಲಕ್ಷ ವೆಚ್ಚದಲ್ಲಿ ಕಾರವಾರ ರೋಟರಿ ಕ್ಲಬ್ನ ಸಹಯೋಗದೊಂದಿಗೆ ನಿರ್ಮಿಸಲಾದ ಈ ಸೌಲಭ್ಯವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ರೈಲುಗಾಗಿ ಕಾಯುವ ಮಹಿಳಾ ಪ್ರಯಾಣಿಕರು ಸುರಕ್ಷಿತ ಹಾಗೂ ಸುಸಜ್ಜಿತ ವಾತಾವರಣದಲ್ಲಿ ನಿರಾಳವಾಗಿ ಸಮಯ ಕಳೆಯಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಗಂಗಾವಳಿ ನದಿಯ ಮಣ್ಣಿನ ದಿಬ್ಬ ತೆರವಿಗೆ ಸತೀಶ್ ಸೈಲ್ ಚಾಲನೆ
ಮಹಿಳಾ ಸುರಕ್ಷತೆಗೆ CC ಕ್ಯಾಮೆರಾ : ‘ಪಿಂಕ್ ಬಬಲ್’ ಆಸನ ವ್ಯವಸ್ಥೆಯಲ್ಲಿ ಮಹಿಳೆಯರ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದ್ದು, ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟುಮಾಡುವವರ ವಿರುದ್ಧ ರೈಲ್ವೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾಗೇರಿ ತಿಳಿಸಿದರು.
ಮಹಿಳಾ ಸ್ನೇಹಿ ರೈಲ್ವೆ ನಿಲ್ದಾಣಗಳ ನಿರ್ಮಾಣದತ್ತ ಇದು ಮಹತ್ವದ ಹೆಜ್ಜೆಯಾಗಿದ್ದು, ಪ್ರಯಾಣದ ಅನುಭವವನ್ನು ಇನ್ನಷ್ಟು ಸುಗಮಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಮಡಗಾಂವ್-ಕಾರವಾರ ರೈಲು ಸೇವೆ ಖಾಯಂ : ಕಾರವಾರ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಗಾಂವ್-ಕಾರವಾರ ನಡುವೆ ಸಂಚರಿಸುತ್ತಿದ್ದ ತಾತ್ಕಾಲಿಕ ರೈಲು ಸೇವೆಯನ್ನು ಖಾಯಂಗೊಳಿಸಿರುವುದನ್ನು ಸಂಭ್ರಮಿಸಲಾಯಿತು. ಕೇಂದ್ರ ರೈಲ್ವೆ ಇಲಾಖೆಯ ತಾತ್ಕಾಲಿಕ ರೈಲುಗಳ ಸೇವೆಯನ್ನು ಖಾಯಂಗೊಳಿಸುವ ನಿರ್ಧಾರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಮೇಕೆದಾಟು ಕಿಚ್ಚು: ವಿಜಯ್ ಆಗಮನಕ್ಕೂ ಮುನ್ನ ಕರವೇ ಕಾರ್ಯಕರ್ತರ ಬಂಧನ
ಮಡಗಾಂವ್ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಸೇವೆಗೆ ಚಾಲನೆ ನೀಡಿದ್ದು, ಇದು ಉತ್ತರ ಕನ್ನಡ ಹಾಗೂ ಗೋವಾ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿದೆ ಎಂದು ಕಾಗೇರಿ ಹೇಳಿದರು.
ಈ ರೈಲು ಸೇವೆಯಿಂದ ಉದ್ಯೋಗಿಗಳು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವೆ ಪಡೆಯುವವರು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: AI ರೋಬೋಟ್ಗಳಿಗೆ ತರಬೇತಿಯಲ್ಲಿ ‘ಗುರು’ಗಳಾದ ಭಾರತೀಯರು!
ಕಾರವಾರ ರೈಲ್ವೆ ನಿಲ್ದಾಣಕ್ಕೆ ಮತ್ತಷ್ಟು ಸೌಲಭ್ಯ : ಕೊಂಕಣ ರೈಲ್ವೆಯ ವತಿಯಿಂದ ಕಾರವಾರ ರೈಲ್ವೆ ನಿಲ್ದಾಣದಲ್ಲಿರುವ ಕಾಯ್ದಿರಿಸಿದ ವಿಶ್ರಾಂತಿ ಕೊಠಡಿಯನ್ನು ಮೇಲ್ದರ್ಜೆಗೆ ಏರಿಸಿ ಏರ್ಕಂಡೀಷನ್ (ಎಸಿ) ಸೌಲಭ್ಯ ಹೊಂದಿರುವ ಕೊಠಡಿಯಾಗಿ ಅಭಿವೃದ್ಧಿಪಡಿಸಲಾಗಿದೆ.
ಇದಲ್ಲದೆ, ಹಿರಿಯ ನಾಗರಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ಪ್ಲಾಟ್ಫಾರ್ಮ್ನಿಂದ ಮತ್ತೊಂದು ಪ್ಲಾಟ್ಫಾರ್ಮ್ಗೆ ತೆರಳಲು ಲಿಫ್ಟ್ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ರೂಪಿಸಲಾಗಿದೆ. ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಮಾರ್ಗದರ್ಶಕ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯವನ್ನೂ ಜಿಲ್ಲಾಡಳಿತ ಹಾಗೂ ಕೊಂಕಣ ರೈಲ್ವೆ ಸಹಯೋಗದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಬೃಹತ್ Diesel ಖರೀದಿಗೆ ಬ್ರೇಕ್: ಕೇಂದ್ರದಿಂದ ಮಹತ್ವದ ಆದೇಶ
ಉತ್ತರ ಕನ್ನಡದಲ್ಲಿ ರೈಲ್ವೆ ವಿಸ್ತರಣೆಗೆ ಒತ್ತು : ಸಂಸದರಾದ ಬಳಿಕ ದಾಂಡೇಲಿ-ಆಳ್ನಾವರ ರೈಲು ಸೇವೆಗೆ ಚಾಲನೆ ನೀಡಿರುವುದನ್ನು ಸ್ಮರಿಸಿದ ಕಾಗೇರಿ, ತಾಳಗುಪ್ಪ-ಸಿದ್ದಾಪುರ-ಶಿರಸಿ-ಕುಮಟಾ ಹಾಗೂ ಮುಂಡಗೋಡ-ತಡಸ ಮಾರ್ಗವಾಗಿ ಹುಬ್ಬಳ್ಳಿ ಸಂಪರ್ಕಿಸುವ ರೈಲು ಮಾರ್ಗದ ಸರ್ವೇ ಪೂರ್ಣಗೊಂಡಿದೆ ಎಂದು ಹೇಳಿದರು.
ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಖಂಡಿತವಾಗಿ ಸಾಕಾರಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ತಾಳಗುಪ್ಪ-ಹೊನ್ನಾವರ ರೈಲು ಮಾರ್ಗದ ಸರ್ವೇ ಕಾರ್ಯವೂ ನಡೆದಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮರಳಿನಲ್ಲಿ ಮೂಡಿದ ಭಾರತದ ಹೆಮ್ಮೆ: ಪರಿಸರ ಸಂದೇಶ ಹೊತ್ತ ಶಿಲ್ಪಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ
ಕೊಂಕಣ ರೈಲ್ವೆಗೆ ₹7 ಸಾವಿರ ಕೋಟಿ ಅನುದಾನ ತರಲು ಪ್ರಯತ್ನ : ಕೊಂಕಣ ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಸುಮಾರು ₹7,000 ಕೋಟಿ ಅನುದಾನ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಕಾಗೇರಿ ತಿಳಿಸಿದರು. ಈ ಅನುದಾನ ದೊರೆತರೆ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಹೆಚ್ಚುವರಿ ಪ್ಲಾಟ್ಫಾರ್ಮ್ಗಳ ನಿರ್ಮಾಣ ಹಾಗೂ ವಿವಿಧ ಆಧುನಿಕ ಸೌಲಭ್ಯಗಳ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಹೇಳಿದರು.
ಕುಮಟಾ ಮತ್ತು ಗೋಕರ್ಣ ರೈಲ್ವೆ ನಿಲ್ದಾಣಗಳಲ್ಲಿ ಎರಡನೇ ಪ್ಲಾಟ್ಫಾರ್ಮ್ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಮುರುಡೇಶ್ವರ ಹಾಗೂ ಭಟ್ಕಳ ರೈಲ್ವೆ ನಿಲ್ದಾಣಗಳಲ್ಲೂ ಮೂಲಭೂತ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತದ ಪ್ರತಿನಿಧಿಗಳು, ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.






















