SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸಾಮೂಹಿಕ ಅತ್ಯಾಚಾರ ಪ್ರಕರಣ: 10 ಆರೋಪಿಗಳ ವಿರುದ್ಧ ಕ್ರಮ

ಸಾಮೂಹಿಕ ಅತ್ಯಾಚಾರ ಪ್ರಕರಣ: 10 ಆರೋಪಿಗಳ ವಿರುದ್ಧ ಕ್ರಮ

0
2

ಚನ್ನಗಿರಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ: 9 ಮಂದಿ ಜೈಲು ಪಾಲು, ಅಪ್ರಾಪ್ತ ಬಾಲಕ ಬಾಲಮಂದಿರಕ್ಕೆ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ 10 ಆರೋಪಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರವೇ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ರಾತ್ರಿ ವೇಳೆ ಎಲ್ಲರಿಗೂ ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಬಳಿಕ ಬುಧವಾರ ಬೆಳಗ್ಗೆ ಆರೋಪಿಗಳನ್ನು ದಾವಣಗೆರೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಪ್ರಕರಣದ ದಾಖಲೆಗಳು ಹಾಗೂ ತನಿಖೆಯ ಪ್ರಗತಿಯನ್ನು ಪರಿಶೀಲಿಸಿದ ನ್ಯಾಯಾಧೀಶರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.

ಬಂಧಿತ ಆರೋಪಿಗಳಲ್ಲಿ ಒಂಬತ್ತು ಮಂದಿಯನ್ನು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಮತ್ತೊಬ್ಬ ಆರೋಪಿಗೆ ಕೇವಲ 16 ವರ್ಷ ವಯಸ್ಸಾಗಿರುವುದರಿಂದ, ಆತನನ್ನು ಕಾನೂನು ಪ್ರಕಾರ ಬಾಲ ಅಪರಾಧಿ ಎಂದು ಪರಿಗಣಿಸಿ ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರತರುವ ನಿಟ್ಟಿನಲ್ಲಿ ಪೊಲೀಸರು ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸುವ ಕೆಲಸವನ್ನು ಮುಂದುವರಿಸಿದ್ದು, ತನಿಖೆ ಮಹತ್ವದ ಹಂತ ತಲುಪಿದೆ. ತನಿಖೆಯ ಅಂತಿಮ ವರದಿ ಹಾಗೂ ಹೆಚ್ಚಿನ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳು ಕೈಗೊಳ್ಳಲಾಗಲಿವೆ.

ಮದ್ಯಪಾನ ಬಿಡುವಂತೆ ಬುದ್ಧಿ ಹೇಳಿದ್ದಕ್ಕೆ ಬೇಸರಗೊಂಡು ರೈಲಿಗೆ ಡಿಕ್ಕಿ ಹೊಡೆದು ಆತ್ಮಹತ್ಯೆ

ದಾವಣಗೆರೆ: ಮದ್ಯಪಾನದ ಚಟದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ದಾವಣಗೆರೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ನಿಟುವಳ್ಳಿ ನಿವಾಸಿ ಮಂಜುನಾಥ್ (೪೮) ಎಂದು ಗುರುತಿಸಲಾಗಿದೆ. ಮಂಜುನಾಥ್ ಅವರು ವಿಪರೀತ ಮದ್ಯಪಾನ ಮಾಡುತ್ತಿದ್ದು, ಮದ್ಯಪಾನ ಬಿಡುವಂತೆ ಕುಟುಂಬದವರು ಪದೇ ಪದೇ ಸಲಹೆ ಹಾಗೂ ಬುದ್ಧಿವಾದ ಹೇಳುತ್ತಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದು ಮಂಜುನಾಥ್ ಅವರು ನಗರದ ಫೈರ್ ಆಫೀಸ್ ಹಿಂಭಾಗದ ರೈಲ್ವೆ ಹಳಿಯ ಬಳಿ ತೆರಳಿ, ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ದಾವಣಗೆರೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.