SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಅಕ್ರಮಗಳಿಗೆ ಸಾಥ್ ಆರೋಪ: CPI ವಿರುದ್ಧ ಅಮಾನತು ಆದೇಶ

ಅಕ್ರಮಗಳಿಗೆ ಸಾಥ್ ಆರೋಪ: CPI ವಿರುದ್ಧ ಅಮಾನತು ಆದೇಶ

0
117

ಅಕ್ರಮ ಚಟುವಟಿಕೆಗಳಿಗೆ ಬೆಂಬಲ ಆರೋಪ; ಪೊಲೀಸ್ ಮಹಾನಿರ್ದೇಶಕರಿಂದ CPI ಅಮಾನತು

ಬಳ್ಳಾರಿ: ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡಿದ ಆರೋಪಗಳ ಹಿನ್ನೆಲೆಯಲ್ಲಿ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ (ಸಿಪಿಐ)ರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕಿ (ಎಸ್‌ಪಿ) ಸುಮನ್ ಡಿ. ಪನ್ನೇಕರ್ ಅವರ ತನಿಖಾ ವರದಿ ಮತ್ತು ಶಿಫಾರಸ್ಸಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಉದಯ ರವಿ ಅವರು ಸುಮಾರು ಒಂದು ವರ್ಷದ ಹಿಂದೆ ಬಳ್ಳಾರಿ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಈ ಅವಧಿಯಲ್ಲೇ ಅವರ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದವು. ಅಕ್ರಮ ಗಣಿ ದಾಸ್ತಾನು, ಅಕ್ರಮ ಮಣ್ಣು ಸಾಗಾಟ ಹಾಗೂ ಸಂಬಂಧಿತ ಚಟುವಟಿಕೆಗಳಿಗೆ ಪೊಲೀಸ್ ಅಧಿಕಾರಿಯಾಗಿ ಬೆಂಬಲ ನೀಡಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದವು.

ಇದನ್ನೂ ಓದಿ: ಲಂಚ ಪಡೆಯುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

ಅಕ್ರಮ ಗಣಿ ದಾಸ್ತಾನು ಆರೋಪ : ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿ ಖನಿಜ ಸಂಗ್ರಹ ಮತ್ತು ದಾಸ್ತಾನು ನಡೆಯುತ್ತಿದ್ದರೂ, ಅದನ್ನು ತಡೆಯುವ ಬದಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಉದಯ ರವಿ ವಿರುದ್ಧ ಕೇಳಿಬಂದಿದೆ. ಅಕ್ರಮ ದಾಸ್ತಾನು ಚಟುವಟಿಕೆ ಬಹಿರಂಗಗೊಂಡ ನಂತರ ಮಾತ್ರ ನಾಮಕಾವಸ್ತೆಗೆ ಪ್ರಕರಣ ದಾಖಲಿಸಿ ಕರ್ತವ್ಯ ನಿರ್ವಹಿಸಿದಂತೆ ತೋರಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪವೂ ತನಿಖೆಯಲ್ಲಿ ಉಲ್ಲೇಖವಾಗಿದೆ.

ಕೆರೆ ಮಣ್ಣು ಸಾಗಾಟಕ್ಕೆ ಕುಮ್ಮಕ್ಕು? : ಕೊಳಗಲ್ಲು ಗ್ರಾಮದಲ್ಲಿ ಕೆರೆಯಿಂದ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದ್ದು, ಟ್ರ್ಯಾಕ್ಟರ್‌ಗಳ ಮೂಲಕ ಸಾಗಾಟ ನಡೆಯುತ್ತಿದ್ದರೂ ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಬದಲಿಗೆ ಅಕ್ರಮ ಸಾಗಾಟಕ್ಕೆ ಪರೋಕ್ಷ ಬೆಂಬಲ ನೀಡಲಾಗಿದೆ ಎಂದು ದೂರಲಾಗಿದೆ. ಇದರ ಜೊತೆಗೆ, ಟ್ರ್ಯಾಕ್ಟರ್ ಮಾಲೀಕರು ಹಾಗೂ ಇಟ್ಟಂಗಿ ಬಟ್ಟಿ (ಇಟ್ಟಿಗೆ ಭಟ್ಟಿ) ಮಾಲೀಕರಿಂದ ಹಣ ವಸೂಲಿ ಮಾಡಿರುವ ಆರೋಪಗಳೂ ತನಿಖೆಯ ವೇಳೆ ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳಿಗೆ ಶಾಕ್: ಅಕ್ರಮ ಚಟುವಟಿಕೆಗಳಿಗೆ ಖಡಕ್ ಎಚ್ಚರಿಕೆ

ಎಸ್‌ಪಿ ತನಿಖೆಯಲ್ಲಿ ಬಹಿರಂಗ : ಸಿಪಿಐ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ಬಳ್ಳಾರಿ ಎಸ್‌ಪಿ ಸುಮನ್ ಡಿ. ಪನ್ನೇಕರ್ ಅವರು ಸಮಗ್ರ ತನಿಖೆ ನಡೆಸಿದ್ದರು. ತನಿಖೆ ವೇಳೆ ಸಂಗ್ರಹಿಸಲಾದ ದಾಖಲೆಗಳು, ಸಾಕ್ಷ್ಯಗಳು ಹಾಗೂ ವಿವಿಧ ವ್ಯಕ್ತಿಗಳ ಹೇಳಿಕೆಗಳನ್ನು ಪರಿಶೀಲಿಸಿದ ಬಳಿಕ ಆರೋಪಗಳಿಗೆ ಮೇಲ್ನೋಟಕ್ಕೆ ಸಾಕಷ್ಟು ಆಧಾರಗಳಿವೆ ಎಂಬ ನಿರ್ಣಯಕ್ಕೆ ಬಂದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವರದಿಯ ಆಧಾರದ ಮೇಲೆ ಉದಯ ರವಿ ವಿರುದ್ಧ ಇಲಾಖಾ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಬಳಿಕ ಪೊಲೀಸ್ ಮಹಾನಿರ್ದೇಶಕರು ಅಮಾನತು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಲಾರಿ–ಟ್ಯಾಂಕರ್ ಡಿಕ್ಕಿಗೆ ಹೊತ್ತಿ ಉರಿದ ವಾಹನಗಳು, ಚಾಲಕ ಸಾವು

ಆದೇಶದಲ್ಲಿ ಏನಿದೆ? : ಅಮಾನತು ಆದೇಶದಲ್ಲಿ, ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕಾನೂನು ಜಾರಿ ಮತ್ತು ಅಕ್ರಮ ತಡೆಗಟ್ಟುವ ಹೊಣೆಗಾರಿಕೆಯನ್ನು ನಿರ್ವಹಿಸುವ ಬದಲು ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡಿರುವುದು ಗಂಭೀರ ಶಿಸ್ತುಲಂಘನೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಅಧಿಕಾರ ದುರುಪಯೋಗ, ಕರ್ತವ್ಯ ಲೋಪ ಹಾಗೂ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟುಮಾಡುವ ರೀತಿಯ ವರ್ತನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಮಾನತು ಕ್ರಮ ಅನಿವಾರ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇಲಾಖಾ ತನಿಖೆ ಮುಂದುವರಿಕೆ : ಸಿಪಿಐ ಉದಯ ರವಿ ವಿರುದ್ಧದ ಆರೋಪಗಳ ಕುರಿತು ಇಲಾಖಾ ತನಿಖೆ ಮುಂದುವರಿಯಲಿದ್ದು, ತನಿಖೆಯ ಅಂತಿಮ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಹಾಗೂ ಆಡಳಿತಾತ್ಮಕ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಬೆಳವಣಿಗೆ ಬಳ್ಳಾರಿ ಪೊಲೀಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂದೇಶವನ್ನು ಪೊಲೀಸ್ ಇಲಾಖೆ ರವಾನಿಸಿದೆ.