ಬೆಳಗಾವಿ(ಬೈಲಹೊಂಗಲ): ನಗರದಲ್ಲಿ ಸೋಮವಾರ ಮಧ್ಯಾಹ್ನ ಏಕಾಏಕಿ ಸುರಿದ ಭಾರೀ ಮಳೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳಿಸಿತು. ಕೆಲವೇ ನಿಮಿಷಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳು ನದಿಗಳಂತಾಗಿ ಹರಿದರೆ, ತಗ್ಗು ಪ್ರದೇಶಗಳು ಜಲಾವೃತಗೊಂಡು ಜನರು ಸಂಕಷ್ಟಕ್ಕೆ ಸಿಲುಕಿದರು.
ಮಳೆಯ ರಭಸಕ್ಕೆ ನಗರದ ಅನೇಕ ಬಡಾವಣೆಗಳು ಮತ್ತು ಪ್ರಮುಖ ರಸ್ತೆಗಳು ನೀರಿನಿಂದ ಆವೃತಗೊಂಡವು. ವಾರ್ಡ್ ನಂಬರ್ 4ರ ಕುಲಕರ್ಣಿ ಗಲ್ಲಿ, ಹರಳಯ್ಯ ಕಾಲೋನಿಯಲ್ಲಿನ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು.
ಮನೆಯೊಳಗೆ ನುಗ್ಗಿದ ನೀರನ್ನು ಪಾತ್ರೆ ಹಾಗೂ ಬಕೆಟ್‌ಗಳ ಮೂಲಕ ಹೊರಹಾಕಲು ಮಹಿಳೆಯರು ಮತ್ತು ಕುಟುಂಬಸ್ಥರು ಹರಸಾಹಸ ಪಟ್ಟ ದೃಶ್ಯಗಳು ಕಂಡುಬಂದವು. ಬಸ್ ನಿಲ್ದಾಣ, ಇಂಚಲ ಕ್ರಾಸ್ ಬಳಿ ನೀರಿನ ಹರಿವು ಅಪಾರ ಪ್ರಮಾಣದಲ್ಲಿ ಹೆಚ್ಚಾಗಿ ನಿಲ್ಲಿಸಿದ್ದ ಕೆಲ ಬೈಕ್‌ಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಬಜಾರ್ ರಸ್ತೆ ನಗರಸಭೆ ಮಳಿಗೆಗಳು, ತಟವಟಿ ಹೀರೋ ಶೋ ರೂಂ ಆವರಣವೂ ಸಂಪೂರ್ಣ ನೀರಿನಿಂದ ಆವೃತಗೊಂಡು ಆಸ್ತಿಪಾಸ್ತಿಗೆ ತುಸು ಹಾನಿಯಾಗಿದೆ.
ಇದೇ ವೇಳೆ, ನ್ಯಾಯಾಲಯದ ಹಿಂಭಾಗದ ಪ್ರಭುನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ವಿದ್ಯುತ್ ಕಂಬದ ಮೇಲೆ ಉರುಳಿಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ಹಾಗೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು.
ನಗರದ ಬಹುತೇಕ ಚರಂಡಿಗಳು ಕಸ ಹಾಗೂ ಮಣ್ಣಿನಿಂದ ಮುಚ್ಚಿಕೊಂಡಿದ್ದ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆಯೇ ಹೊಳೆಯಂತೆ ಹರಿಯಿತು. ಬೆಳಗಾವಿ ರಸ್ತೆಯ ಗ್ರಂಥಾಲಯದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಒಂದು ಬದಿಯ ರಸ್ತೆ ಸಂಪೂರ್ಣ ನೀರಿನಿಂದ ಆವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪರಿಣಾಮವಾಗಿ ಒಂದೇ ಮಾರ್ಗದಲ್ಲಿ ವಾಹನಗಳ ಸಂಚಾರ ನಡೆದಿದ್ದು, ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ಅಮಟೂರ ಬಾಳಪ್ಪ ವೃತ್ತ, ಇಂಚಲ ಕ್ರಾಸ್, ದೀಪಾ ಹೋಟೆಲ್ ಸನಿಹ ಹಾಗೂ ರಾಯಣ್ಣ ವೃತ್ತ ಪ್ರದೇಶಗಳಲ್ಲಿ ಪಾದಚಾರಿಗಳು ಮತ್ತು ವಾಹನ ಸವಾರರು ನೀರಿನ ನಡುವೆ ಸಂಚರಿಸಲು ಹರಸಾಹಸ ಪಟ್ಟರು. ಸೋಮವಾರಪೇಟೆಯಲ್ಲಿರುವ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ನೀರಿನ ಸೆಳೆತ ಹೆಚ್ಚಾದ ಪರಿಣಾಮ ವ್ಯಾಪಾರಿಗಳು ಮಾರಾಟಕ್ಕೆ ಇಟ್ಟಿದ್ದ ತರಕಾರಿ ಹಾಗೂ ಹಣ್ಣುಗಳು ನೀರಿನಲ್ಲಿ ತೇಲಿ ಹೋಗಿ ನಷ್ಟ ಅನುಭವಿಸಿದರು.
ಭಾರೀ ಮಳೆಯ ಪರಿಣಾಮ ಬೈಲಹೊಂಗಲ-ಮುನವಳ್ಳಿ ರಸ್ತೆಯ ಹೊಸೂರ ಸಮೀಪ ಹಾಗೂ ಬೈಲಹೊಂಗಲ ಬೆಳಗಾವಿ ಸಾಣಿಕೊಪ್ಪ ಹಳ್ಳಗಳು ತುಂಬಿ ಹರಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಇದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳ ಮೊರೆ ಹೋಗಬೇಕಾಯಿತು.






















