SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ: ನಾಗನೂರು ಶ್ರೀಗಳ ಘೋಷಣೆ

ಬೆಳಗಾವಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ: ನಾಗನೂರು ಶ್ರೀಗಳ ಘೋಷಣೆ

0
96

ಬೆಳಗಾವಿ: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ವಿಷಯದಲ್ಲಿ ನಾಗನೂರು ಮಠದ ಶ್ರೀಗಳು ಅತ್ಯಂತ ಖಡಕ್ ನಿಲುವು ವ್ಯಕ್ತಪಡಿಸಿದ್ದು, “ಬೆಳಗಾವಿಯನ್ನು ಕರ್ನಾಟಕದಲ್ಲೇ ಉಳಿಸಲು ಪ್ರಾಣತ್ಯಾಗಕ್ಕೂ ಸಿದ್ಧ” ಎಂದು ಘೋಷಿಸಿದ್ದಾರೆ.

ನಾಗನೂರು ಮಠದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಬೆಳಗಾವಿ ಕೇವಲ ಭೌಗೋಳಿಕ ಪ್ರದೇಶವಲ್ಲ, ಅದು ಕನ್ನಡಿಗರ ಸ್ವಾಭಿಮಾನ, ಇತಿಹಾಸ ಮತ್ತು ಹೋರಾಟದ ಫಲ ಎಂದು ಸ್ಪಷ್ಟಪಡಿಸಿದರು.

ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಒಂದು ಸಾಲಿನ ಠರಾವ್ ಅಂಗೀಕರಿಸುವುದು ಅಷ್ಟು ದೊಡ್ಡ ವಿಷಯವಲ್ಲ. ಆದರೂ ಅದನ್ನು ಮುಂದೂಡುತ್ತಿರುವುದು ಕನ್ನಡಿಗರ ಭಾವನೆಗೆ ಧಕ್ಕೆ ತರುವಂತಾಗಿದೆ ಎಂದು ಶ್ರೀಗಳು ಹೇಳಿದರು.

‘ಮೀನಾ–ಮೇಷ ಬೇಡ. ಪಾಲಿಕೆ ತಕ್ಷಣ ಠರಾವ್ ಪಾಸ್ ಮಾಡಬೇಕು. ಕನ್ನಡಿಗರ ವಿಶ್ವಾಸ ಉಳಿಸಿಕೊಳ್ಳುವುದು ಇವತ್ತಿನ ಪಾಲಿಕೆಯ ಜವಾಬ್ದಾರಿ’ ಎಂದು ಅವರು ಎಚ್ಚರಿಸಿದರು.

ನಾಗನೂರು ಮಠದ ಪೂಜ್ಯರು ಬೆಳಗಾವಿ ಕನ್ನಡ ಹೋರಾಟದಲ್ಲಿ ಅನುಭವಿಸಿದ ನೋವು, ತ್ಯಾಗಗಳನ್ನು ನೆನಪಿಸಿದ ಶ್ರೀಗಳು, ‘ಆ ಹೋರಾಟಗಳ ಫಲವಾಗಿಯೇ ಬೆಳಗಾವಿ ಕರ್ನಾಟಕದಲ್ಲಿ ಉಳಿದಿದೆ. ಆ ಪರಂಪರೆಯ ಮಠ ಇಂದು ಕೂಡ ಕನ್ನಡಪರ ಸಂಘಟನೆಗಳ ಜೊತೆ ನಿಂತಿದೆ’ ಎಂದರು.

ಪಾಲಿಕೆಗೆ ಶ್ರೀಗಳ ನೇರ ಸಂದೇಶ: ‘ಇದು ಬಹಳ ಸಣ್ಣ ವಿಷಯ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಪಾಲಿಕೆ ಒಂದು ಸಾಲಿನ ಠರಾವಾಗಿ ದಾಖಲಿಸಬೇಕು. ಸುಪ್ರೀಂ ಕೋರ್ಟ್ ನೆಪ ಹೇಳಿಕೊಂಡು ಕಾಲ ಕಳೆಯುವುದು ಸರಿಯಲ್ಲ. ಪಾಲಿಕೆ ಕನ್ನಡಿಗರ ವಿಶ್ವಾಸ ಕಳೆದುಕೊಂಡರೆ ಮುಂದಿನ ದಿನಗಳಲ್ಲಿ ಅದರ ಅಸ್ತಿತ್ವವೇ ಪ್ರಶ್ನೆಯಾಗಬಹುದು’ ಎಂದು ಶ್ರೀಗಳು ಖಡಕ್ ಎಚ್ಚರಿಕೆ ನೀಡಿದರು.

ಬೆಳಗಾವಿ ಕರ್ನಾಟಕದ್ದೇ ಎಂಬ ಘೋಷಣೆಗೆ ನಾಗನೂರು ಮಠದ ವೇದಿಕೆಯಿಂದ ಮತ್ತೊಮ್ಮೆ ಬಲ ಸಿಕ್ಕಿದ್ದು, ಈ ಹೋರಾಟ ಈಗ ಕೇವಲ ಸಂಘಟನೆಗಳ ಒತ್ತಾಯವಲ್ಲ, ಮಠದ ನೈತಿಕ ಬೆಂಬಲ ಪಡೆದ ಕನ್ನಡ ಸ್ವಾಭಿಮಾನದ ಚಳವಳಿಯಾಗಿ ರೂಪುಗೊಳ್ಳುತ್ತಿದೆ.

ಸಭೆಯಲ್ಲಿ ಕನ್ಮಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ನಗರಸೇವಕ ರಮೇಶ ಸೊಂಟಕ್ಕಿ, ದಿನೇಶ ನಾಶಿಪುಡಿ. ಮಹಾದೇವ ತಳವಾರ ಬಲರಾಮ ಮಾಸೇನಟ್ಟಿ, ಶ್ರೀನಿವಾಸ ತಾಳೂಕರ ಮುಂತಾದವರು ಹಾಜರಿದ್ದರು.