SK Home Ad
Home ನಮ್ಮ ಜಿಲ್ಲೆ ಧಾರವಾಡ ಒಂದೇ ಶಾಲೆಯ ಹದಿನೇಳು ವಿದ್ಯಾರ್ಥಿಗಳು ʻಅಗ್ನಿವೀರ’ರಾಗಿ ಆಯ್ಕೆ

ಒಂದೇ ಶಾಲೆಯ ಹದಿನೇಳು ವಿದ್ಯಾರ್ಥಿಗಳು ʻಅಗ್ನಿವೀರ’ರಾಗಿ ಆಯ್ಕೆ

0
250

ಸಿ.ವೈ. ಲಗಮಣ್ಣವರ
ಧಾರವಾಡ (ಉಪ್ಪಿನಬೆಟಗೇರಿ): ʻಅಗ್ನಿವೀರ’ರಾಗಿ ದೇಶ ಸೇವೆ ಮಾಡಬೇಕು ಎಂದು ಯುವಕರು ಅದಕ್ಕಾಗಿ ಅನೇಕ ರೀತಿಯ ಕಸರತ್ತು ನಡೆಸುತ್ತಾರೆ. ಆಯ್ಕೆಯ ಸಂದರ್ಭದಲ್ಲಿ ನಾನೂ ಆಯ್ಕೆಯಾಗುವೆ ಎಂಬ ಕನಸು ಹೊತ್ತು ಕುಳಿತಿರುವ ಯುವಕರ ಮಧ್ಯೆ ಧಾರವಾಡದ ಉಪ್ಪಿನಬೆಟಗೇರಿಯ ಶಾಲೆಯೊಂದರಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಈ ಬಾರಿ ಜಾಕ್‌ಪಾಟ್‌ ಹೊಡೆದಿದೆ.

ಉಪ್ಪಿನಬೆಟಗೇರಿ ಗ್ರಾಮದ ಶ್ರೀ ಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆಯಲ್ಲಿ ಕಲಿತ 17 ಯುವಕರು ʻಅಗ್ನಿವೀರ’ರಾಗಿ ದೇಶ ಸೇವೆಗೈಯಲು ಆಯ್ಕೆಯಾಗಿದ್ದು, ಒಂದೇ ಶಾಲೆಯಲ್ಲಿ ಕಲಿತ ಇಷ್ಟು ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ಸೈನಿಕರಾಗಿ ದೇಶ ಸೇವೆಗೆ ಹೊರಟಿರುವುದು ಗ್ರಾಮಸ್ಥರಲ್ಲಿ ಸಂತಸವನ್ನು ತಂದಿದೆ.

ಉಪ್ಪಿನಬೆಟಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನೇಕ ಯುವಕರು ಈಗಾಗಲೇ ʻಅಗ್ನಿವೀರ’ರಾಗಿ ದೇಶದ ಹಲವಾರು ಕಡೆ ಸೇವೆ ಸಲ್ಲಿಸುತ್ತಿದ್ದು, ಈಗ ಜೂನ್ 2ರಂದು ಪ್ರಕಟವಾದ ಆಯ್ಕೆಪಟ್ಟಿಯಲ್ಲಿ ಈ ಶಾಲೆಯಲ್ಲಿ ಕಲಿತ ಉಪ್ಪಿನಬೆಟಗೇರಿ, ಕಲ್ಲೂರ, ಹನುಮನಾಳ ಗ್ರಾಮಗಳ ಒಟ್ಟು 17 ಯುವಕರು ಒಂದೇ ಬಾರಿಗೆ ʻಅಗ್ನಿವೀರ’ರಾಗಿ ಆಯ್ಕೆಯಾಗಿರುವುದು ಈ ಪ್ರೌಢಶಾಲೆಯ ಜೊತೆಗೆ ಈ ಗ್ರಾಮಗಳ ಕೀರ್ತಿಯನ್ನು ಹೆಚ್ಚಿಸಿದಂತಾಗಿದೆ.

ಉಪ್ಪಿನಬೆಟಗೇರಿಯ ಶಂಕರ ಕುರಗುಂದ, ಶಿವಾನಂದ ಮಸೂತಿ, ನಿರಂಜನ ಹುಟಗಿ, ಕಲೀಮ ಮುಜಾವರ, ಈರಣ್ಣ ಮಸೂತಿ, ಗಂಗಾಧರ ಅಂಬಣ್ಣವರ, ಶಬ್ಬೀರ ನದಾಫ ಸೇರಿದಂತೆ ಒಟ್ಟು 7 ಯುವಕರು ಹಾಗೂ ಕಲ್ಲೂರಿನ ಅಭಿಷೇಕ ಚಿಕ್ಕಮಠ, ಪ್ರದೀಪ ಮರೇದ, ಕುಮಾರ ಬುಡ್ರಕಟ್ಟಿ, ಈರಣ್ಣ ಮರೇದ, ಪ್ರದೀಪ ಶಿವಳ್ಳಿ, ಅಮೀತಪೀರ ಸಯ್ಯದನವರ ಸೇರಿದಂತೆ ಒಟ್ಟು 6 ಯುವಕರು ಮತ್ತು ಹನುಮನಾಳ ಗ್ರಾಮದ ಗೋಪಾಲ ಅಂಗಡಿ, ಸೋಮಲಿಂಗ ಅಂಗಡಿ, ಗೋಪಾಲ ಗಬ್ಬೂರ, ಮೆಳೆಪ್ಪ ಅಂಗಡಿ ಸೇರಿದಂತೆ ಒಟ್ಟು 4 ಯುವಕರು ಹೀಗೆ ಉಪ್ಪಿನಬೆಟಗೇರಿಯ ಶ್ರೀ ಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆಯಲ್ಲಿ ಕಲಿತ ಒಟ್ಟು 17 ಯುವಕರು ʻಅಗ್ನಿವೀರ’ರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.