SK Home Ad
Home ಸುದ್ದಿ ದೇಶ ಸ್ತ್ರೀಯರ ಇಂಟರ್ನೆಟ್ ಬಳಕೆ ಪ್ರಮಾಣ ಶೇ. 64.3ಕ್ಕೆ ಏರಿಕೆ

ಸ್ತ್ರೀಯರ ಇಂಟರ್ನೆಟ್ ಬಳಕೆ ಪ್ರಮಾಣ ಶೇ. 64.3ಕ್ಕೆ ಏರಿಕೆ

0
325

ನವದೆಹಲಿ: ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಇಂಟರ್‌ನೆಟ್ ಬಳಕೆ ಪ್ರಮಾಣ ಶೆ. 33.3 ರಿಂದ ಶೇ. 64.3ಕ್ಕೆ ಏರಿದೆ. ಅಲ್ಲದೆ, ಮಹಿಳೆಯರು ಸ್ವಯಂ ಬ್ಯಾಂಕ್ ಖಾತೆಗಳನ್ನು ತೆರೆದು ವ್ಯವಹರಿಸುವ ಪ್ರಮಾಣವೂ ಶೇ. 78.6 ರಿಂದ ಶೇ. 89.0ಗೆ ಏರಿದೆ ಎಂದು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷಾ (ಎನ್‌ಎಫ್‌ಎಚ್‌ಎಸ್) ವರದಿ 6 ರಲ್ಲಿ ಪ್ರಕಟವಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ವರದಿಯನ್ನು ಬಿಡುಗಡೆ ಮಾಡಿದ್ದು, ದೇಶಾದ್ಯಂತ ತಾಯಿ ಮತ್ತು ಶಿಶು ಆರೋಗ್ಯ, ಪೌಷ್ಠಿಕತೆ, ಶುಚಿತ್ವ, ಹಣಕಾಸು ರಕ್ಷಣೆ ಮತ್ತು ಮಹಿಳಾ ಸಬಲೀಕರಣ ಇತ್ಯಾದಿ ವಿವರಗಳನ್ನು ಇದು ಒಳಗೊಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯವು 2023-24ರಲ್ಲಿ ದೇಶಾದ್ಯಂತ 715 ಜಿಲ್ಲೆಗಳ 6.79 ಲಕ್ಷ ಕುಟುಂಬಗಳನ್ನು ಸಂಪರ್ಕಿಸಿ ಈ ಸಮೀಕ್ಷೆ ನಡೆಸಿತ್ತು. ಅದರ ವರದಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದೆ.

ಎನ್‌ಎಫ್‌ಎಚ್‌ಎಸ್-6 ವರದಿ ಪ್ರಕಾರ ಮಹಿಳೆಯರು ತಮ್ಮ ಸ್ವಂತ ಮೊಬೈಲ್ ಬಳಸುವ ಪ್ರಮಾಣ ಶೇ. 53.9 ರಿಂದ ಶೇ. 63.6ಕ್ಕೆ ಏರಿದೆ. 15 ರಿಂದ 24 ವಯೋಮಾನದ ಮಹಿಳೆಯರು ತಮ್ಮ ಮಾಸಿಕ ಮುಟ್ಟಿನ ಅವಧಿಯಲ್ಲಿ ಕಾಪಾಡಿಕೊಳ್ಳುವ ಶುಚಿತ್ವದ ಪ್ರಮಾಣವು ಸಹ ಶೇ. 77.6 ರಿಂದ 79.2ಕ್ಕೆ ಏರಿದೆ.

ಕಾಂಗ್ರೆಸ್ ಟೀಕೆ-ಬಿಜೆಪಿ ಪ್ರತ್ಯುತ್ತರ: ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷಾ (ಎನ್‌ಎಫ್‌ಎಚ್‌ಎಸ್) ವರದಿ ಅಂಕಿ-ಅಂಶಗಳು ನರೇಂದ್ರ ಮೋದಿ ಸರ್ಕಾರದ ಅಸಾಮರ್ಥ್ಯವನ್ನು ಬಯಲಿಗಿಟ್ಟಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಈ ಟೀಕೆಗೆ ಬಿಜೆಪಿ ನಾಯಕ ಜೆ.ಪಿ. ನಡ್ಡಾ ಪ್ರತ್ಯುತ್ತರ ನೀಡಿದ್ದು, ಅರ್ಧಂಬರ್ಧ ಜ್ಞಾನ ಅಪಾಯಕಾರಿ. ಇದೀಗ ಆರೋಗ್ಯ ಎಕೋಸಿಸ್ಟಂನಲ್ಲಿ ಭಾರೀ ಬದಲಾವಣೆ ಆಗಿದೆ ಎಂದಿದ್ದಾರೆ.