ಬೆಳಗಾವಿ: ಸಾರ್ವಜನಿಕರಿಂದ ಹೂಡಿಕೆ, ಠೇವಣಿ ಹಾಗೂ ವಿವಿಧ ಹಣಕಾಸು ಯೋಜನೆಗಳ ಹೆಸರಿನಲ್ಲಿ ಹಣ ಸಂಗ್ರಹಿಸಿ ಹೆಚ್ಚಿನ ಲಾಭದ ಭರವಸೆ ನೀಡಲಾಗಿದೆ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ಆದಿತ್ಯ ರಾಜ್ ಕ್ಯಾಪಿಟಲ್ ಸಂಸ್ಥೆಯ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.
ಪ್ರಕರಣವು ಬಹುಕೋಟಿ ವಂಚನೆ ಸ್ವರೂಪದ್ದಾಗಿರುವ ಶಂಕೆಯ ಹಿನ್ನೆಲೆಯಲ್ಲಿ ತನಿಖೆ ಸಿಐಡಿಗೆ ಹಸ್ತಾಂತರಿಸಲಾಗಿದೆ. ಅಲ್ಲದೆ, ಪ್ರಕರಣದ ಪ್ರಮುಖ ಆರೋಪಿ ಪರಾರಿಯಾಗದಂತೆ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮತ್ತು ಪೊಲೀಸ್ ಆಯುಕ್ತ ಭೂಷಣ ಗುಲಾಬ್ ಬೋರಸೆ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ಸಂಸ್ಥೆಯ ಜಾಹೀರಾತು ಪ್ರಕಟಣೆಗಳ ಆಧಾರದ ಮೇಲೆ ತನಿಖೆಗೆ ಆದೇಶ ಮಾಡಲಾಗಿದೆ. ಕರ್ನಾಟಕ ಠೇವಣಿದಾರರ ಹಿತಾಸಕ್ತಿ ರಕ್ಷಣಾ ಕಾಯ್ದೆ, 2004ರ ಸೆಕ್ಷನ್ 3 ಮತ್ತು 4ರಡಿ ಬೆಳಗಾವಿ ಉಪವಿಭಾಗದ ಸಹಾಯಕ ಆಯುಕ್ತರು ತನಿಖೆ ನಡೆಸುತ್ತಿದ್ದಾರೆ ಎಂದರು.
ಪ್ರಕರಣದ ಗಂಭೀರತೆ ಪರಿಗಣಿಸಿ ಪ್ರಮುಖ ಆರೋಪಿ ದೇಶ ತೊರೆಯುವುದು ಅಥವಾ ತನಿಖೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ತಡೆಯಲು ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದ ವಿಮಾನ ನಿಲ್ದಾಣಗಳು, ಬಂದರುಗಳು ಹಾಗೂ ದೇಶದ ನಿರ್ಗಮನ ಕೇಂದ್ರಗಳಲ್ಲಿ ಸಂಬಂಧಿತ ಅಧಿಕಾರಿಗಳು ನಿಗಾ ವಹಿಸಲಿದ್ದಾರೆಂದರು.
ಸಿಐಡಿಗೆ ಹಸ್ತಾಂತರ: ಆದಿತ್ಯ ರಾಜ್ ಕ್ಯಾಪಿಟಲ್ ಪ್ರಕರಣದಲ್ಲಿ ಸಾರ್ವಜನಿಕರಿಂದ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪಗಳಿರುವುದರಿಂದ, ಇದನ್ನು ಬಹುಕೋಟಿ ವಂಚನೆ ಪ್ರಕರಣ ಎಂದು ಪರಿಗಣಿಸಿ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸಲಾಗಿದೆ. ಹಣದ ಹರಿವು, ಬ್ಯಾಂಕ್ ಖಾತೆಗಳು, ಡಿಜಿಟಲ್ ವ್ಯವಹಾರಗಳು, ಹೂಡಿಕೆದಾರರ ಪಟ್ಟಿ, ಸಂಸ್ಥೆಯ ದಾಖಲೆಗಳು ಮತ್ತು ಆಸ್ತಿ ವಿವರಗಳ ಬಗ್ಗೆ ಸಿಐಡಿ ಆಳವಾದ ತನಿಖೆ ನಡೆಸುವ ನಿರೀಕ್ಷೆಯಿದೆ.
ಡಿಸಿ ಆದೇಶದಲ್ಲೇನಿದೆ?: ಸಂಸ್ಥೆಯು ಸಾರ್ವಜನಿಕರಿಂದ ಹಣ ಸ್ವೀಕರಿಸಲು ಅಗತ್ಯವಾದ ನೋಂದಣಿ, ಅನುಮತಿ, ಪರವಾನಗಿ ಅಥವಾ ನಿಯಂತ್ರಣ ಸಂಸ್ಥೆಗಳ ಮಾನ್ಯತೆ ಹೊಂದಿದೆಯೇ ಎಂಬುದನ್ನೂ ಪರಿಶೀಲಿಸಲು ಸೂಚಿಸಲಾಗಿದೆ. ತನಿಖಾ ಅಧಿಕಾರಿಗಳಿಗೆ ಸಂಸ್ಥೆಯ ದಾಖಲೆಗಳು, ಒಪ್ಪಂದಗಳು, ಖಾತೆ ಪುಸ್ತಕಗಳು, ಬ್ಯಾಂಕ್ ಖಾತೆ ವಿವರಗಳು, ಎಲೆಕ್ಟ್ರಾನಿಕ್ ದಾಖಲೆಗಳು, ಡಿಜಿಟಲ್ ಡೇಟಾ, ಜಾಹೀರಾತು ಸಾಮಗ್ರಿ ಹಾಗೂ ಪ್ರಚಾರ ಪತ್ರಿಕೆಗಳನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ. ಅಗತ್ಯವಿದ್ದರೆ ಸಂಸ್ಥೆಯ ಕಚೇರಿ ಹಾಗೂ ಸಂಬಂಧಿತ ಸ್ಥಳಗಳಲ್ಲಿ ಕಾನೂನುಬದ್ಧವಾಗಿ ಶೋಧ, ಪರಿಶೀಲನೆ ಮತ್ತು ದಾಖಲೆಗಳ ವಶಪಡಿಸಿಕೊಳ್ಳುವ ಕ್ರಮವೂ ಕೈಗೊಳ್ಳಬಹುದಾಗಿದೆ.
ಭಯ ಬೇಡ: ಆದಿತ್ಯ ರಾಜ್ ಕ್ಯಾಪಿಟಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮೊಹಮ್ಮದ್ ರೋಷನ್ ಅವರು ಸ್ಪಷ್ಟಪಡಿಸಿದ್ದಾರೆ.
ಠೇವಣಿದಾರರ ಹಿತಾಸಕ್ತಿ ರಕ್ಷಿಸುವುದು ಜಿಲ್ಲಾಡಳಿತದ ಮೊದಲ ಆದ್ಯತೆ. ಹಣ ವಾಪಸ್ ನೀಡುವ ಸಂಬಂಧ ಕಾನೂನುಬದ್ಧ ಅಧಿಕಾರ ದೊರೆತ ನಂತರ, ಹೂಡಿಕೆದಾರರು ಅಗತ್ಯ ದಾಖಲೆ ಒದಗಿಸಿದರೆ ಆರು ತಿಂಗಳೊಳಗೆ ಹಣ ಮರುಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಹೂಡಿಕೆದಾರರ ವಿವರ, ಠೇವಣಿ ದಾಖಲೆಗಳು, ಬ್ಯಾಂಕ್ ವ್ಯವಹಾರಗಳು ಹಾಗೂ ಸಂಸ್ಥೆಯ ಆಸ್ತಿ ಬಾಧ್ಯತೆಗಳ ಕುರಿತು ಪರಿಶೀಲನೆ ನಡೆಯುತ್ತಿದೆ. ಹೂಡಿಕೆದಾರರು ತಮ್ಮ ಬಳಿ ಇರುವ ರಸೀದಿ, ಒಪ್ಪಂದ ಪತ್ರ, ಬ್ಯಾಂಕ್ ಪಾವತಿ ದಾಖಲೆ, ಆನ್‌ಲೈನ್ ವರ್ಗಾವಣೆ ವಿವರಗಳು ಹಾಗೂ ಸಂಸ್ಥೆಯಿಂದ ಪಡೆದ ಯಾವುದೇ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.






















