ರವೀಶ ಪವಾರ
ಧಾರವಾಡ: ಗುರು ಬ್ರಹ್ಮ… ಗುರು ವಿಷ್ಣು…. ಗುರುದೇವೋ ಮಹೇಶ್ವರ… ಗುರು ಸಾಕ್ಷಾತ್ ಪರಬ್ರಹ್ಮ… ತಸ್ಮೈಶ್ರೀ ಗುರುವೇ ನಮಃ…. ಎನ್ನುವ ಶ್ಲೋಕವನ್ನು ಪ್ರತಿಯೊಬ್ಬ ಮಕ್ಕಳಿಗೂ ಕಲಿಸಲಾಗುತ್ತದೆ. ಆದರೆ, ವಿದ್ಯೆಯನ್ನು ನೀಡುವ ಗುರುವೇ ವಿದ್ಯಾರ್ಥಿನಿಯೊಂದಿಗೆ ಲವ್ವಿಡವ್ವಿ ಮಾಡಿದರೆ…?
ಕರ್ನಾಟಕ ವಿಶ್ವವಿದ್ಯಾಲಯ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇದ್ದು, ಈಗ ಮತ್ತೆ ಪ್ರಾಧ್ಯಾಪಕನೋರ್ವನ ಕರ್ಮಕಾಂಡದಿಂದ ಸುದ್ದಿಯಾಗಿದೆ. ಇಲ್ಲಿಯ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೇವರಾಜ ತಂಗುದೊರೈ ಎಂಬಾತ ವಿಜಯಪುರ ಮೂಲದ ಹಾಗೂ ಅದೇ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದ್ದು, ಆಕೆಗಾಗಿ ಸದ್ಯ ಎಲ್ಲಿಲ್ಲದಂತೆ ಪರದಾಡುತ್ತಿದ್ದಾನೆಂದು ತಿಳಿದಿದೆ.
ಈ ಪ್ರಾಧ್ಯಾಪಕ ಅದೇ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಪ್ರೀತಿ ಮಾಡಿದ್ದಾನೆ. ಅಲ್ಲದೇ ಇವರಿಬ್ಬರ ಪ್ರೀತಿ ಹೆಮ್ಮರವಾಗಿ ಬೆಳೆದಿದ್ದು, ಸಾಕಷ್ಟು ಕಡೆಗಳಲ್ಲಿ ಇಬ್ಬರೂ ಸುತ್ತಾಡಿಕೊಂಡು ಬಂದಿದ್ದಾರೆ. ಪ್ರೀತಿ ಮಧುರ, ತ್ಯಾಗ ಅಮರ ಎನ್ನುವಂತಾದ ಈ ಜೋಡಿ ಸುಮಾರು ವರ್ಷಗಳವರೆಗೆ ಇದೇ ರೀತಿಯಲ್ಲಿ ಮುಂದುವರೆದಿತ್ತು.
ಆದರೆ, ಲವ್ವಿಡವ್ವಿಯಲ್ಲಿ ಮುಳುಗಿದ್ದ ಪ್ರಾಧ್ಯಾಪಕ ವಿದ್ಯಾರ್ಥಿನಿಯೊಂದಿಗೆ ಕಳೆದಿದ್ದ ಕೆಲವು ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದನಂತೆ. ಇದಾದ ಸ್ವಲ್ಪ ದಿನದಲ್ಲಿಯೇ ಇವರಿಬ್ಬರ ಪ್ರೀತಿ ಗೊತ್ತಾಗಿ ವಿದ್ಯಾರ್ಥಿನಿಯ ಕುಟುಂಬದವರು ಆಕೆಯ ಪಿಎಚ್‌ಡಿಯನ್ನು ಅರ್ಧಕ್ಕೆ ನಿಲ್ಲಿಸಿ ಮರಳಿ ಮನೆಗೆ ಕರೆಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರೀತಿಯಲ್ಲಿ ಪ್ರಾಧ್ಯಾಪಕ ಪಾಗಲ್…: ವಿದ್ಯಾರ್ಥಿನಿಯನ್ನು ಮನೆಯವರು ಕರೆದುಕೊಂಡು ಹೋದ ಬೆನ್ನಲ್ಲಿಯೇ ಪ್ರೀತಿಯಲ್ಲಿ ಪಾಗಲ್ ಆಗಿದ್ದ ಪ್ರಾಧ್ಯಾಪಕ, ಸ್ವಲ್ಪ ದಿನಗಳ ಬಳಿಕ ವಿಜಯಪುರ ಮೂಲದ ವೇದವ್ಯಾಸ ಚೌವ್ಹಾಣ ಎಂಬ ವಿದ್ಯಾರ್ಥಿ ತನ್ನ ಬಳಿ ಪಿಎಚ್‌ಡಿ ಮಾಡಲು ಬಂದಾಗ ನಿರಂತರ ಪೀಡಿಸಿದ್ದಲ್ಲದೇ ತನ್ನನ್ನು ಬಿಟ್ಟು ಹೋದ ವಿದ್ಯಾರ್ಥಿನಿ ನಿಮ್ಮ ಜಿಲ್ಲೆಯವಳೇ. ಆಕೆಯನ್ನು ಕರೆದುಕೊಂಡು ಬಾ ಅಂದರೆ ಮಾತ್ರ ನಿನ್ನ ಪಿಎಚ್‌ಡಿ ಪೂರ್ಣ ಮಾಡಿಕೊಡುತ್ತೇನೆ ಎಂದು ಒತ್ತಾಯ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಆಡಿಯೋ ವೈರಲ್…: ವಿದ್ಯಾರ್ಥಿ ವೇದವ್ಯಾಸಗೆ ನಿತ್ಯ ವಿವಿಯಲ್ಲಿ ಕಿರುಕುಳ ನೀಡುವುದು ಮಾತ್ರವಲ್ಲದೇ ಆತನಿಗೆ ಕರೆ ಮಾಡಿಯೂ ವಿದ್ಯಾರ್ಥಿನಿಯನ್ನು ಕರೆತರುವಂತೆ ಒತ್ತಡ ಹೇರುತ್ತಲೇ ಇದ್ದನು ಎನ್ನಲಾಗಿದೆ. ಇದರಿಂದ ಬೇಸತ್ತ ವಿದ್ಯಾರ್ಥಿ ವೇದವ್ಯಾಸ ಕುಲಸಚಿವರಿಗೆ ಈ ಕುರಿತು ದೂರು ನೀಡಿದ್ದು, ಸದ್ಯ ಎಚ್ಚೆತ್ತುಕೊಂಡ ವಿದ್ಯಾರ್ಥಿ ಸಂಘಟನೆಯವರು ಆ ಪ್ರಾಧ್ಯಾಪಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಪ್ರಾಧ್ಯಾಪಕ ಮಾತನಾಡಿದ ಆಡಿಯೋಗಳನ್ನೂ ದೂರಿನೊಂದಿಗೆ ಕುಲಸಚಿವರಿಗೆ ನೀಡಿದ್ದಾರೆ.





















