SK Home Ad
Home ಸುದ್ದಿ ಹಸೆಮಣೆ ಏರುವ ಮುನ್ನವೇ ಪಾತಾಳಕ್ಕೆ ತಳ್ಳಿದ ಭಾವೀ ಪತ್ನಿ: ಸಂಚಿಗೆ ಬಲಿಯಾದ ಉದ್ಯಮಿ

ಹಸೆಮಣೆ ಏರುವ ಮುನ್ನವೇ ಪಾತಾಳಕ್ಕೆ ತಳ್ಳಿದ ಭಾವೀ ಪತ್ನಿ: ಸಂಚಿಗೆ ಬಲಿಯಾದ ಉದ್ಯಮಿ

0
102

ಮುಂಬೈ: ಮುಂದಿನ ಜೀವನದ ಬಗ್ಗೆ ಸಾವಿರಾರು ಕನಸುಗಳನ್ನು ಹೊತ್ತುಕೊಂಡು ಹಸೆಮಣೆ ಏರಲು ಸಜ್ಜಾದ ಮದುಮಗ, ಫೋಟೋಶೂಟ್‌ ವೇಳೆ 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದ ಘಟನೆಗೆ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ.

ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ ಜೂನ್ 18 ರಂದು ನಡೆದಿದ್ದ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರ ನಿಗೂಢ ಸಾವು ಈಗ ಭೀಕರ ಕೊಲೆ ಎಂಬ ವಿಷಯ ಬಯಲಾಗಿದೆ.

ಜೀವ ತೆಗೆದ ಭಾವಿ ಪತ್ನಿ: ಪುಣೆಯ ಗಹುಂಜೆ ನಿವಾಸಿಯಾದ 24 ವರ್ಷದ ಕೇತನ್ ವಿಶಾಲ್ ಅಗರ್ವಾಲ್ ಎಂಬ ಯುವಕ, ತನ್ನ ಭಾವಿ ಪತ್ನಿ ಸಿಯಾ ಪ್ರವೀಣ್ ಗೋಯಲ್ (20) ಜೊತೆ ಲೋಹಗಢ ಕೋಟೆಗೆ ಚಾರಣ ಮಾಡಲು ಹೋಗಿದ್ದಾಗ 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದ. ಈ ವೇಳೆ ಸಿಯಾ ಪೊಲೀಸರ ಮುಂದೆ, “ಜೋರಾಗಿ ಗಾಳಿ ಬೀಸುತ್ತಿತ್ತು, ಸೆಲ್ಫಿ ತೆಗೆದುಕೊಳ್ಳುವಾಗ ಸಮತೋಲನ ತಪ್ಪಿ ಕೇತನ್ ಕೆಳಗೆ ಬಿದ್ದ” ಎಂದು ಕಣ್ಣೀರಿಡುತ್ತಾ ನಾಟಕವಾಡಿದ್ದಳು. ಆದರೆ ಲೋನಾವಾಲಾ ಗ್ರಾಮೀಣ ಪೊಲೀಸರು ನಡೆಸಿದ ಆಳವಾದ ತನಿಖೆಯಲ್ಲಿ ಸಿಯಾಳ ಅಸಲಿ ಮುಖವಾಡ ಕಳಚಿಬಿದ್ದಿದೆ.

ಪೊಲೀಸ್ ತನಿಖೆಯ ಪ್ರಕಾರ, ಇದು ಅಪಘಾತವಲ್ಲ, ಬದಲಿಗೆ ಸಿಯಾ ತನ್ನ ಹಳೆಯ ಸ್ನೇಹಿತ ಹಾಗೂ ಇತರ ಕೆಲವು ಸಹಚರರೊಂದಿಗೆ ಸೇರಿ ನಡೆಸಿದ ಪೂರ್ವನಿಯೋಜಿತ ಕೊಲೆ. ಲೋಹಗಢ ಕೋಟೆಯ ಮೇಲಿಂದ ತಳ್ಳಿ ಕೇತನ್‌ನನ್ನು ಮುಗಿಸಲು ಮೊದಲೇ ಸ್ಕೆಚ್ ಹಾಕಲಾಗಿತ್ತು. ಒಂದು ವೇಳೆ ಈ ‘ಪ್ಲಾನ್ ಎ’ ವಿಫಲವಾಗಿದ್ದರೆ, ಕೇತನ್‌ನನ್ನು ಮಹಾಬಲೇಶ್ವರಕ್ಕೆ ಕರೆದೊಯ್ದು ಅಲ್ಲಿ ಕೊಲ್ಲಲು ʻಪ್ಲಾನ್ ಬಿʼ ಕೂಡ ಸಿದ್ಧವಾಗಿತ್ತು ಎಂದು ತಿಳಿದುಬಂದಾಗ ಇಡೀ ವ್ಯವಸ್ಥೆಯೇ ನಡುಗಿದೆ.

“ನನ್ನ ಮಗನನ್ನು ಯಾಕೆ ಕೊಂದೆ? ಕಣ್ಣೀರಲ್ಲಿ ಮುಳುಗಿದ ತಂದೆ: ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕೇತನ್ ತಂದೆ ವಿಶಾಲ್ ಅಗರ್ವಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರತಿಯೊಬ್ಬರ ಕಣ್ಣನ್ನು ಒದ್ದೆಯಾಗಿಸುವಂತಿದೆ.

“ಪುಣೆಯ ಆ ಧೂರ್ತ ಹುಡುಗಿ ಸಿಯಾ ಗೋಯಲ್ ಈಗಾಗಲೇ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಆಕೆಯ ನಡವಳಿಕೆ ಮತ್ತು ಕರಾಳ ಇತಿಹಾಸದ ಬಗ್ಗೆ ಆಕೆಯ ಇಡೀ ಕುಟುಂಬಕ್ಕೆ ಗೊತ್ತಿದ್ದರೂ, ನಮ್ಮನ್ನು ವಂಚಿಸಿ ಮುಗ್ಧನಾದ ನನ್ನ ಮಗ ಕೇತನ್ ಜೊತೆ ಮದುವೆ ನಿಶ್ಚಯ ಮಾಡಿದರು. ಈ ಹಿಂದೆಯೂ ಆಕೆ ಕೇತನ್‌ನನ್ನು ಕೊಲ್ಲಲು ಯತ್ನಿಸಿ ಸೋತಿದ್ದಳು. ಕೊನೆಗೆ ಜೂನ್ 18 ರಂದು ತನ್ನ ಪ್ರಿಯಕರನ ಸಹಾಯದಿಂದ ನನ್ನ ಮಗನನ್ನು ಕ್ರೂರವಾಗಿ ಕೊಲೆ ಮಾಡಿದ್ದಾಳೆ.

“ನಿನಗೆ ನನ್ನ ಮಗ ಇಷ್ಟವಿಲ್ಲದಿದ್ದರೆ ಮದುವೆ ಸಂಬಂಧವನ್ನು ಮುರಿದುಕೊಳ್ಳಬಹುದಿತ್ತಲ್ಲವೇ? ಅದಕ್ಕೆ ನನ್ನ ಮುಗ್ಧ ಮಗನ ಪ್ರಾಣವನ್ನೇ ತೆಗೆಯಬೇಕಿತ್ತೇ? ನನ್ನ ಮಗನ ಹತ್ಯೆಯಿಂದ ನಮಗಾಗಿರುವ ಈ ಎಂದಿಗೂ ತುಂಬಲಾರದ ನಷ್ಟವನ್ನು ಯಾರು ಭರ್ತಿ ಮಾಡಿಕೊಡುತ್ತಾರೆ?” ಎಂದು ವಿಶಾಲ್‌ ಪ್ರಶ್ನಿಸಿದ್ದಾರೆ.

ತಂದೆಯ ಈ ಆರ್ತನಾದ, ನ್ಯಾಯಕ್ಕಾಗಿ ಅವರು ನಡೆಸುತ್ತಿರುವ ಹೋರಾಟ ಪ್ರತಿಯೊಬ್ಬರ ಹೃದಯವನ್ನು ಕಲಕುತ್ತಿದೆ. ಸದ್ಯಕ್ಕೆ ಪೊಲೀಸರು ಸಿಯಾ ಗೋಯಲ್, ಆಕೆಯ ಸ್ನೇಹಿತ ಸೇರಿ ಎಂಟು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರೀತಿ ಹಾಗೂ ವಿಶ್ವಾಸದ ಹೆಸರಿನಲ್ಲಿ ನಡೆದ ಈ ರಕ್ತಸಿಕ್ತ ವಂಚನೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ.