Home Advertisement
Home ಸುದ್ದಿ ದೇಶ ಫ್ರೆಂಡ್ ಅನ್ನೇ ಕಿಡ್ನಾಪ್ ಮಾಡಿದ ಬೆಂಗಳೂರಿನ ಕ್ಲಾಸ್‌ಮೆಟ್‌ಗಳು; 50,000 ರೂ.ಗೆ ಪುಂಡರು ಪೊಲೀಸರ ಬಲೆಗೆ ಬಿದ್ದಿದ್ದು...

ಫ್ರೆಂಡ್ ಅನ್ನೇ ಕಿಡ್ನಾಪ್ ಮಾಡಿದ ಬೆಂಗಳೂರಿನ ಕ್ಲಾಸ್‌ಮೆಟ್‌ಗಳು; 50,000 ರೂ.ಗೆ ಪುಂಡರು ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?

0
42

ಬೆಂಗಳೂರಿನಲ್ಲಿ ವಿದ್ಯಾರ್ಥಿ ಸಮುದಾಯವೇ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ತಮ್ಮ ಐಷಾರಾಮಿ ಜೀವನದ ಹಸಿವನ್ನು ನೀಗಿಸಿಕೊಳ್ಳಲು ಹಣದ ಆಸೆಗೆ ಬಿದ್ದ ನಾಲ್ವರು ವಿದ್ಯಾರ್ಥಿಗಳು, ತಮ್ಮದೇ ಕಾಲೇಜಿನ ಸಹಪಾಠಿಯನ್ನು ಅಪಹರಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಬಿಹಾರ, ಜಮ್‌ಶೆಡ್‌ಪುರ, ಕೇರಳ ಹಾಗೂ ಬೆಂಗಳೂರು ಮೂಲದ ಈ ವಿದ್ಯಾರ್ಥಿಗಳು ಒಡಿಶಾ ಮೂಲದ ಮೊಹಂತಿ ಎಂಬ ವಿದ್ಯಾರ್ಥಿಯನ್ನು ಸಂಚು ರೂಪಿಸಿ ಕಿಡ್ನ್ಯಾಪ್ ಮಾಡಿದ್ದರು.

ಆರೋಪಿ ವಿದ್ಯಾರ್ಥಿಗಳು ಮೊಹಂತಿಯನ್ನು ಪುಸಲಾಯಿಸಿ ಆತನ ಹಾಸ್ಟೆಲ್‌ನಿಂದ ಹೊರಗೆ ಕರೆಸಿಕೊಂಡಿದ್ದಾರೆ. ನಂತರ ಆತನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ತಮ್ಮ ಬಾಡಿಗೆ ಕೋಣೆಗೆ ಕರೆದೊಯ್ದು ಕೂಡಿ ಹಾಕಿದ್ದಾರೆ. ಅಲ್ಲಿಂದ ಮೊಹಂತಿಯ ಸ್ನೇಹಿತರಿಗೆ ಕರೆ ಮಾಡಿದ ಈ ಕಿಡ್ನ್ಯಾಪರ್‌ಗಳು, ಆತನ ಬಿಡುಗಡೆಗಾಗಿ 50,000 ರೂಪಾಯಿಗಳ ಬೇಡಿಕೆಯಿಟ್ಟಿದ್ದಾರೆ. ಇದನ್ನು ನಂಬಿದ ಸಂತ್ರಸ್ತನ ಸ್ನೇಹಿತರು ಮೊದಲು 10,000 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ, ಆದರೆ ತಡಮಾಡದೆ ತಕ್ಷಣವೇ ‘112’ ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತಾ ಎಂ.ಎಸ್. ಅವರ ನೇತೃತ್ವದ ಮಡಿವಾಳ ಪೊಲೀಸರ ತಂಡ, ತಾಂತ್ರಿಕ ನೆರವಿನೊಂದಿಗೆ ಆರೋಪಿಗಳ ಲೊಕೇಶನ್ ಪತ್ತೆಹಚ್ಚಿದೆ. ರಾತ್ರಿ 8:30ರ ಸುಮಾರಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಮಿಂಚಿನ ವೇಗದಲ್ಲಿ ದಾಳಿ ನಡೆಸಿದ ಪೊಲೀಸರು, ಮಧ್ಯರಾತ್ರಿ 1 ಗಂಟೆಯ ಒಳಗೆ ಮೊಹಂತಿಯನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಎರಡು ಗಂಟೆಗಳ ಅಂತರದಲ್ಲಿ ಸಿನಿಮಾ ಶೈಲಿಯ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳಿಂದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಬೆದರಿಸಲು ಬಳಸಿದ್ದ ನಕಲಿ ಲೋಹದ ಪಿಸ್ತೂಲು ಮತ್ತು ಒಂದು ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಡಿಸಿಪಿ ಮೊಹಮ್ಮದ್ ಸುಜೀತಾ ಅವರು, ಸಂತ್ರಸ್ತ ಮತ್ತು ಆರೋಪಿಗಳು ಒಂದೇ ಕಾಲೇಜಿಗೆ ಸೇರಿದವರಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಈ ವಿದ್ಯಾರ್ಥಿಗಳು ಈ ಹಿಂದೆಯೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.