Home Advertisement
Home ಕ್ರೀಡೆ ಮುಂಬೈ ಟು ಲಕ್ನೋ: ನಿರೀಕ್ಷೆ ಹುಸಿಗೊಳಿಸಿದ ಆಟಗಾರರು; ಫ್ರಾಂಚೈಸಿಗಳ ಕೈಬಿಡುವ ಪಟ್ಟಿಯಲ್ಲಿ ಯಾರಿದ್ದಾರೆ? ಇಲ್ಲಿದೆ ಡಿಟೇಲ್ಸ್

ಮುಂಬೈ ಟು ಲಕ್ನೋ: ನಿರೀಕ್ಷೆ ಹುಸಿಗೊಳಿಸಿದ ಆಟಗಾರರು; ಫ್ರಾಂಚೈಸಿಗಳ ಕೈಬಿಡುವ ಪಟ್ಟಿಯಲ್ಲಿ ಯಾರಿದ್ದಾರೆ? ಇಲ್ಲಿದೆ ಡಿಟೇಲ್ಸ್

0
36

ಐಪಿಎಲ್ ಎನ್ನುವುದು ಯುವ ಪ್ರತಿಭೆಗಳಿಗೆ ರಾತ್ರೋರಾತ್ರಿ ಸ್ಟಾರ್‌ಗಳಾಗಲು ಇರುವ ಸುವರ್ಣ ಅವಕಾಶ. ಆದ್ರೆ 2026ರ ಆವೃತ್ತಿಯಲ್ಲಿ ಕೆಲವು ಆಟಗಾರರು ಅತಿಯಾದ ಒತ್ತಡಕ್ಕೆ ಮಣಿದು ಅಥವಾ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ಭಾರಿ ನಿರಾಶೆ ಮೂಡಿಸಿದ್ದಾರೆ. ವೈಭವ್ ಸೂರ್ಯವಂಶಿಯಂತಹ ಕಿರಿಯ ಆಟಗಾರರು ಮಿಂಚುತ್ತಿದ್ದರೆ, ಈ ನಾಲ್ವರು ಆಟಗಾರರ ಕಳಪೆ ಪ್ರದರ್ಶನ ಮುಂದಿನ ಐಪಿಎಲ್ ಭವಿಷ್ಯವನ್ನು ಪ್ರಶ್ನಾರ್ಥಕ ಚಿಹ್ನೆಯನ್ನಾಗಿಸಿದೆ.

ಮುಂಬೈ ಇಂಡಿಯನ್ಸ್‌ನ ಆ ಇಬ್ಬರು ಯುವಕರು: ಮುಂಬೈ ಇಂಡಿಯನ್ಸ್ ತಂಡವು ವಿದರ್ಭದ 22 ವರ್ಷದ ಆರಂಭಿಕ ಬ್ಯಾಟರ್ ಡ್ಯಾನಿಶ್ ಮಾಲೆವಾರ್ ಮೇಲೆ ಸಾಕಷ್ಟು ಭರವಸೆ ಇಟ್ಟಿತ್ತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಬ್ಯಾಕಪ್ ಆರಂಭಿಕರಾಗಿ ಕಣಕ್ಕಿಳಿದ ಡ್ಯಾನಿಶ್, ಗುಜರಾತ್ ವಿರುದ್ಧ ಕೇವಲ 2 ರನ್ ಗಳಿಸಿದರೆ, ಚೆನ್ನೈ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಇವರ ಜೊತೆಗೆ 21 ವರ್ಷದ ವೇಗಿ ಕ್ರಿಶ್ ಭಗತ್ ಕೂಡ ಸಿಕ್ಕ ಅವಕಾಶವನ್ನು ಹಾಳು ಮಾಡಿಕೊಂಡಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ಒಂದೂ ವಿಕೆಟ್ ಪಡೆಯದೇ, 10.5ರ ಎಕಾನಮಿ ರೇಟ್‌ನಲ್ಲಿ ರನ್ ಬಿಟ್ಟುಕೊಡುವ ಮೂಲಕ ಮ್ಯಾನೇಜ್‌ಮೆಂಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಡೆಲ್ಲಿ ಮತ್ತು ಲಕ್ನೋ ತಂಡಗಳ ವೈಫಲ್ಯ: ಡೆಲ್ಲಿ ಕ್ಯಾಪಿಟಲ್ಸ್ ಪರ ದೊಡ್ಡ ಭರವಸೆಯೊಂದಿಗೆ ಕಣಕ್ಕಿಳಿದ 18 ವರ್ಷದ ಸಾಹಿಲ್ ಪರಾಖ್, ಭುವನೇಶ್ವರ್ ಕುಮಾರ್ ಅನುಭವಿ ಬೌಲಿಂಗ್ ಎದುರು ಮಂಕಾದರು. ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ ಎರಡು ಎಸೆತಗಳನ್ನು ಎದುರಿಸಿ ಸೊನ್ನೆ ಸುತ್ತಿದ ಇವರಿಗೆ, ಮುಂಬರುವ ದಿನಗಳಲ್ಲಿ ಮತ್ತೆ ಅವಕಾಶ ಸಿಗುವುದು ದುಸ್ತರವಾಗಿದೆ.

ಇನ್ನು ಲಕ್ನೋ ಸೂಪರ್ ಜಾಯಿಂಟ್ಸ್ ತಂಡವು ವನಿಂದು ಹಸರಂಗ ಬದಲಿಗೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜಾರ್ಜ್ ಲಿಂಡೆಗೆ ಮಣೆ ಹಾಕಿತ್ತು. ಆದ್ರೆ 34 ವರ್ಷದ ಲಿಂಡೆ ಮೂರು ಪಂದ್ಯಗಳಿಂದ ಕೇವಲ 31 ರನ್ ಹಾಗೂ 1 ವಿಕೆಟ್ ಪಡೆದು ವಿದೇಶಿ ಆಟಗಾರರ ಕೋಟಾದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಒಟ್ಟಾರೆ… ಐಪಿಎಲ್‌ನಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಈ ನಾಲ್ವರಿಗೆ 2026ರ ಸೀಸನ್ ಕೊನೆಯದಾಗುವ ಎಲ್ಲಾ ಸಾಧ್ಯತೆಗಳಿವೆ. ಫ್ರಾಂಚೈಸಿಗಳು ಈಗಾಗಲೇ ಈ ಆಟಗಾರರ ಬದಲಿಗೆ ಹೊಸ ಆಟಗಾರರ ಹುಡುಕಾಟ ನಡೆಸುತ್ತಿರುವುದು ಈ ಆಟಗಾರರ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆಯಾಗಲಿದೆ.