Home Advertisement
Home ಕ್ರೀಡೆ ವಿರಾಟ್ ಕೊಹ್ಲಿ ಖಡಕ್ ಉತ್ತರ: ತಂಡಕ್ಕೆ ಮೌಲ್ಯ ತರಲು ಸಾಧ್ಯವಾದರೆ ಮಾತ್ರ ಮುಂದಿನ ವಿಶ್ವಕಪ್ ಆಡುವೆ

ವಿರಾಟ್ ಕೊಹ್ಲಿ ಖಡಕ್ ಉತ್ತರ: ತಂಡಕ್ಕೆ ಮೌಲ್ಯ ತರಲು ಸಾಧ್ಯವಾದರೆ ಮಾತ್ರ ಮುಂದಿನ ವಿಶ್ವಕಪ್ ಆಡುವೆ

0
47

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ, ತಾವು ಸಾಬೀತುಪಡಿಸಲು ಇನ್ನು ಏನೂ ಬಾಕಿ ಉಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಬರುವ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಕುರಿತು ಮಾತನಾಡಿದ್ದು, ತಂಡಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಸಾಧ್ಯವಾದರೆ ಮಾತ್ರ ಕೊಹ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.

ತಮ್ಮ ಐಪಿಎಲ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ 37 ವರ್ಷದ ಕೊಹ್ಲಿ, “ನಾನು ಭಾಗವಾಗಿರುವ ಪರಿಸರಕ್ಕೆ ನನ್ನಿಂದ ಮೌಲ್ಯವರ್ಧನೆ ಸಾಧ್ಯ ಎಂದು ನನಗೂ ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೂ ಅನಿಸಿದರೆ ಮಾತ್ರ ನಾನು ಖಂಡಿತವಾಗಿಯೂ ವಿಶ್ವಕಪ್‌ನಲ್ಲಿ ಆಡುತ್ತೇನೆ. ಪ್ರತಿ ಪಂದ್ಯದಲ್ಲೂ ನನ್ನ ಕೊನೆಯ ಎಸೆತ ಎಂಬಂತೆ ನಾನು ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತೇನೆ. ಆದ್ರೆ ಪ್ರತಿ ಹಂತದಲ್ಲೂ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ನನಗಿಲ್ಲ” ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸ್ಥಿರತೆಯ ಮೇಲಿನ ಟೀಕೆಗಳಿಗೆ ತಿರುಗೇಟು: 2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಕೊಹ್ಲಿ, ಕಳೆದ ವರ್ಷ ತಮ್ಮ 123 ಪಂದ್ಯಗಳ ಟೆಸ್ಟ್ ವೃತ್ತಿಜೀವನಕ್ಕೂ ಮುಕ್ತಾಯ ಹಾಡಿದ್ದರು. ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಸಕ್ರಿಯರಾಗಿರುವ ವಿರಾಟ, ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಸತತವಾಗಿ ಶೂನ್ಯಕ್ಕೆ ಔಟಾದಾಗ ತೀವ್ರ ಟೀಕೆ ಎದುರಿಸಿದ್ದರು. ಆದ್ರೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಬಲವಾದ ಪ್ರದರ್ಶನ ನೀಡುವ ಮೂಲಕ ಟೀಕಾಕಾರರಿಗೆ ಬ್ಯಾಟ್‌ನಿಂದಲೇ ಉತ್ತರಿಸಿದ್ದಾರೆ.

ಸದ್ಯ ಐಪಿಎಲ್ RCB ಪಂದ್ಯ ಆಟದ ವೇಳೆ ಭರ್ಜರಿ ಶತಕದೊಂದಿಗೆ ಫಾರ್ಮ್‌ನಲ್ಲಿರುವ ಕೊಹ್ಲಿ, ಇದುವರೆಗೆ 311 ಏಕದಿನ ಪಂದ್ಯಗಳಿಂದ 58.71ರ ಸರಾಸರಿಯಲ್ಲಿ 14,797 ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ (18,426 ರನ್) ನಂತರ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ. 2027ರ ಏಕದಿನ ವಿಶ್ವಕಪ್ ಮುಂದಿನ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ಜಂಟಿಯಾಗಿ ನಡೆಯಲಿದೆ.