ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯ 39ನೇ ಪಂದ್ಯದಲ್ಲಿ ಸೋಮವಾರವಾದ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಡೆಲ್ಲಿ ಕ್ಯಾಪಿಟಲ್ಸ್ ಸವಾಲನ್ನು ಎದುರಿಸಲಿದೆ.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳಿಗೂ ಪ್ಲೇ-ಆಫ್ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.
ನಾಯಕ ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡವು ಪ್ರಸಕ್ತ ಸರಣಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಡೆಲ್ಲಿ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ಸೋಲನುಭವಿಸಿದ್ದರೂ, ನಂತರದ ಪಂದ್ಯಗಳಲ್ಲಿ ಚೇತರಿಸಿಕೊಂಡಿದೆ.
ವಿರಾಟ್ ಕೊಹ್ಲಿ ಮತ್ತು ಜಾಕಬ್ ಬೆಥಲ್ ಕಳೆದ ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ಅವರ ಸ್ಫೋಟಕ ಆರಂಭ ನೀಡಲು ವಿಫಲರಾಗಿದ್ದರು. ಆದ್ರೆ, ವಿರಾಟ್‌ನ 81 ರನ್‌ಗಳ ಕಾಣಿಕೆ ತಂಡಕ್ಕೆ ದೊಡ್ಡ ಬಲವಾಯಿತು. ಮಧ್ಯಮ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್ ಮತ್ತು ಟಿಮ್ ಡೇವಿಡ್ ಅವರ ಫಿನಿಶಿಂಗ್ ಆಟವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಮತ್ತು ಯಶ್ ದಯಾಲ್ ಎದುರಾಳಿಗಳಿಗೆ ಕಂಟಕವಾಗಬಲ್ಲರು.
ಮತ್ತೊಂದೆಡೆ, ಅಕ್ಷರ್ ಪಟೇಲ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸದ್ಯ ಸಂಕಷ್ಟದಲ್ಲಿದೆ. ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಡೆಲ್ಲಿಗೆ ಪ್ಲೇ-ಆಫ್ ಆಸೆ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ತಂಡದ ಪರ ಕೆ.ಎಲ್. ರಾಹುಲ್ ಮತ್ತು ಸಮೀರ್ ರಿಜ್ವಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ ಮತ್ತು ಮಿಚೆಲ್ ಸ್ಟಾರ್ಕ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ತಂಡವು ತನ್ನ ತವರು ಮೈದಾನದಲ್ಲಿ ಮತ್ತೆ ಲಯಕ್ಕೆ ಮರಳುವ ತವಕದಲ್ಲಿದೆ.
ಇಲ್ಲಿಯವರೆಗೆ ನಡೆದ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸಿದೆ. ಆಡಿರುವ 33 ಪಂದ್ಯಗಳಲ್ಲಿ ಆರ್‌ಸಿಬಿ 20 ಬಾರಿ ಗೆದ್ದಿದ್ದರೆ, ಡೆಲ್ಲಿ 12 ಪಂದ್ಯಗಳಲ್ಲಿ ಜಯಗಳಿಸಿದೆ. ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ, ಏಕೆಂದರೆ ಇಲ್ಲಿ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಿದೆ.
ಫಿಲ್ ಸಾಲ್ಟ್ ಅಲಭ್ಯ ಸದ್ಯ ಆರ್‌ಸಿಬಿಯ ಆರಂಭಿಕ ಅಟಗಾರ ಫಿಲ್ ಸಾಲ್ಟ್ ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಹೀಗಾಗಿ, ಆರಂಭಿಕರ ಮೇಲೆ ಒತ್ತಡ ಹೆಚ್ಚಾಗಲಿದೆ.
ಪಂದ್ಯ: ರಾತ್ರಿ 7:30ಕ್ಕೆ























