SK Home Ad
Home ಸುದ್ದಿ ರಾಜ್ಯ ಸಂಚಾರಿ ನಿಯಮ ಉಲ್ಲಂಘನೆ: ಸರ್ಕಾರಿ ವಾಹನಗಳಿಂದ 19 ಕೋಟಿ ರೂ. ದಂಡ ಬಾಕಿ!

ಸಂಚಾರಿ ನಿಯಮ ಉಲ್ಲಂಘನೆ: ಸರ್ಕಾರಿ ವಾಹನಗಳಿಂದ 19 ಕೋಟಿ ರೂ. ದಂಡ ಬಾಕಿ!

0
14

ಕರ್ನಾಟಕದಲ್ಲಿ ಸಂಚಾರಿ ನಿಯಮಗಳನ್ನು ಜಾರಿಗೆ ತರುವ ಹೊಣೆ ಹೊತ್ತ ಸರ್ಕಾರಿ ಇಲಾಖೆಗಳೇ ಈಗ ನಿಯಮಗಳನ್ನು ಗಾಳಿಗೆ ತೂರಿವೆ. ಕಳೆದ ಮೂರೂವರೆ ವರ್ಷಗಳಲ್ಲಿ ಸರ್ಕಾರಿ ಮತ್ತು ಪೊಲೀಸ್ ವಾಹನಗಳಿಂದ ಬರೋಬ್ಬರಿ 19.23 ಕೋಟಿ ರೂಪಾಯಿ ದಂಡ ಬಾಕಿ ಉಳಿದಿದೆ ಎಂದು ಗೃಹ ಇಲಾಖೆಯ ಅಧಿಕೃತ ವರದಿ ತಿಳಿಸಿದೆ. ಇದು ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆ ಮಾತನ್ನು ನೆನಪಿಸುತ್ತಿದೆ.

ವರದಿಯ ಪ್ರಕಾರ, ಒಟ್ಟು 85,844 ಪ್ರಕರಣಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ. ಇದರಲ್ಲಿ ಪೊಲೀಸರ ಪಾತ್ರವೂ ಸಣ್ಣದಿಲ್ಲ, ಪೊಲೀಸ್ ಇಲಾಖೆಯ ವಾಹನಗಳ ಮೇಲೆ 3,366 ಕೇಸ್‌ಗಳು ದಾಖಲಾಗಿವೆ. 2024ರಲ್ಲಿ 1,494 ಪ್ರಕರಣಗಳಿದ್ದರೆ, 2025ರಲ್ಲಿ 1,251 ಪ್ರಕರಣಗಳು ದಾಖಲಾಗಿವೆ.

ಇನ್ನುಳಿದ ಸರ್ಕಾರಿ ಇಲಾಖೆಗಳ ವಾಹನಗಳ ಮೇಲೆ ದಾಖಲಾದ ಕೇಸ್‌ಗಳ ಸಂಖ್ಯೆ ಬರೋಬ್ಬರಿ 82,478 ದಾಟಿದೆ. ವಿಶೇಷವಾಗಿ 2024 ಮತ್ತು 2025ರಲ್ಲಿ ಕ್ರಮವಾಗಿ 35 ಸಾವಿರ ಮತ್ತು 38 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಆಘಾತಕಾರಿ ಸಂಗತಿ.

ಸಾಮಾನ್ಯ ನಾಗರಿಕರು ಹೆಲ್ಮೆಟ್ ಧರಿಸದಿದ್ದರೆ ಅಥವಾ ಸಿಗ್ನಲ್ ಜಂಪ್ ಮಾಡಿದರೆ ತಕ್ಷಣ ದಂಡ ವಸೂಲಿ ಮಾಡುವ ವ್ಯವಸ್ಥೆ, ಸರ್ಕಾರಿ ವಾಹನಗಳ ಮುಂದೆ ಕುಂಟುತ್ತಿದೆ. 2024ರಲ್ಲಿ ವಿಧಿಸಲಾದ 17.48 ಕೋಟಿ ರೂಪಾಯಿ ದಂಡದಲ್ಲಿ ವಸೂಲಾಗಿದ್ದು ಕೇವಲ 35 ಲಕ್ಷ ರೂಪಾಯಿ ಮಾತ್ರ! ಅಂದರೆ ಸರಿಸುಮಾರು 17 ಕೋಟಿಗೂ ಅಧಿಕ ಹಣ ಇನ್ನೂ ಬಾಕಿ ಉಳಿದಿದೆ.

ಇತ್ತೀಚಿನ 2026ರ ಜುಲೈ ವರೆಗಿನ ವರದಿಯ ಪ್ರಕಾರ ಒಟ್ಟಾರೆ 19.23 ಕೋಟಿ ರೂಪಾಯಿ ದಂಡದ ಹಣ ಸರ್ಕಾರದ ಬೊಕ್ಕಸಕ್ಕೆ ಸೇರಿಲ್ಲ. ಸರ್ಕಾರಿ ಬೋರ್ಡ್ ಇರುವುದರಿಂದ ನಿಯಮಗಳನ್ನು ಪಾಲಿಸಬೇಕಿಲ್ಲ ಎಂಬ ಉಡಾಫೆ ಮನಸ್ಥಿತಿ ಈ ಅಂಕಿ-ಅಂಶಗಳಿಂದ ಸಾಬೀತಾಗಿದೆ.

ಜನಸಾಮಾನ್ಯರಿಗೆ ಪಾಠ ಹೇಳುವ ಇಲಾಖೆಗಳೇ ರಾಜಾರೋಷವಾಗಿ ಕಾನೂನು ಮುರಿಯುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಂಡ ಪಾವತಿಯಲ್ಲಿ ಸಾಮಾನ್ಯರಿಗೊಂದು ನ್ಯಾಯ, ಅಧಿಕಾರಿಗಳಿಗೊಂದು ನ್ಯಾಯವೇ ಎಂಬ ಪ್ರಶ್ನೆ ಎದ್ದಿದೆ.