ಮುಂಬರುವ 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅನಿರೀಕ್ಷಿತ ಆರ್ಥಿಕ ಶಾಕ್ ನೀಡಿದೆ. ಪರೀಕ್ಷಾ ಮತ್ತು ನೋಂದಣಿ ಶುಲ್ಕವನ್ನು ಶೇಕಡಾ 5ರಷ್ಟು ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಪರಿಷ್ಕೃತ ನಿಯಮದ ಪ್ರಕಾರ, ಮೊದಲ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಶುಲ್ಕವು ರೂ.710 ರಿಂದ ರೂ.746ಕ್ಕೆ ಏರಿಕೆಯಾಗಿದೆ. ಈಗಾಗಲೇ ಪ್ರಕ್ರಿಯೆ ಮುಗಿಸಿ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಕೂಡ ಉಳಿದ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕೆಂದು ಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಖಾಸಗಿ ಮತ್ತು ಪುನರಾವರ್ತಿತ (ರಿಪೀಟರ್ಸ್) ವಿದ್ಯಾರ್ಥಿಗಳ ಮೇಲೂ ಈ ಪರಿಷ್ಕರಣೆ ನೇರ ಪರಿಣಾಮ ಬೀರಿದೆ:
- ಖಾಸಗಿ ಅಭ್ಯರ್ಥಿಗಳು: ನೋಂದಣಿ ಶುಲ್ಕ ರೂ.248 ರಿಂದ ರೂ.260 ಕ್ಕೆ ಏರಿಕೆಯಾಗಿದೆ.
- ಒಂದು ವಿಷಯಕ್ಕೆ: ರೂ.448ರ ಬದಲಿಗೆ ರೂ.470 ಪಾವತಿಸಬೇಕು.
- ಎರಡು ವಿಷಯಗಳಿಗೆ: ರೂ.559 ರಿಂದ ರೂ.587 ಕ್ಕೆ ಹೆಚ್ಚಿಸಲಾಗಿದೆ.
- ಮೂರು ಅಥವಾ ಹೆಚ್ಚು ವಿಷಯಗಳಿಗೆ: ಶುಲ್ಕವು ರೂ.752 ರಿಂದ ರೂ.790 ಕ್ಕೆ ತಲುಪಿದೆ.
ವಾರ್ಷಿಕ ಪರೀಕ್ಷಾ ವೆಚ್ಚ, ಪ್ರಶ್ನೆಪತ್ರಿಕೆ ಮುದ್ರಣ ಹಾಗೂ ಮೌಲ್ಯಮಾಪನ ನಿರ್ವಹಣಾ ವೆಚ್ಚಗಳು ಅಧಿಕವಾಗಿರುವ ಹಿನ್ನೆಲೆಯಲ್ಲಿ ಈ ದರ ಏರಿಕೆ ಅನಿವಾರ್ಯ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಆದರೆ, ಪರೀಕ್ಷಾ ಸಿದ್ಧತೆಯ ನಡುವೆ ಹೊರಬಿದ್ದಿರುವ ಈ ದಿಢೀರ್ ಆದೇಶವು ಮಧ್ಯಮ ಹಾಗೂ ಬಡ ಕುಟುಂಬದ ಪೋಷಕರಲ್ಲಿ ಅಸಮಾಧಾನ ಮೂಡಿಸಿದೆ.






















