ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಬೃಹತ್ ಮುಷ್ಕರ ನಡೆಸಲು ಸಜ್ಜಾಗಿದ್ದ ಸಾರಿಗೆ ನೌಕರರ ಸಂಘಟನೆಗಳಿಗೆ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.
ಸಾರಿಗೆ ನೌಕರರ ಸಂಘಟನೆಗಳು ಮೇ 20ರಂದು ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್ ಮಾಡಿ ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದ ಬೆನ್ನಲ್ಲೇ ಹೈಕೋರ್ಟ್ ಪೀಠವು, ಸಾರ್ವಜನಿಕರ ಹಿತದೃಷ್ಟಿಯಿಂದ ಸದ್ಯ ಯಾವುದೇ ಮುಷ್ಕರ ನಡೆಸದಂತೆ ಸೂಚನೆ ನೀಡಿದೆ.
ಮುಷ್ಕರ ನಡೆಸಲು ಉದ್ದೇಶಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮುಷ್ಕರ ಅಥವಾ ಪ್ರತಿಭಟನೆ ನಡೆಸದಂತೆ ಸೂಚಿಸಿದೆ. ಅಲ್ಲದೇ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರದ ಜೊತೆ ಮಾತುಕತೆ ನಡೆಸಿ ಎಂದು ತಿಳಿಸಿದೆ.
ಸರ್ಕಾರದ ಜತೆ ಚರ್ಚಿಸಿ: ಸಾರಿಗೆ ನೌಕರರ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಈ ಕೂಡಲೇ ಮುಂದಾಗಬೇಕು. ಸಂಘಟನೆಗಳು ಮತ್ತು ಸರಕಾರ ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಮುಷ್ಕರ ನಡೆಸಂದಂತೆ ಖಡಕ್ ಸೂಚನೆ: ಸದ್ಯಕ್ಕೆ ಮುಷ್ಕರ ನಡೆಸದಂತೆ ಸೂಚನೆ ನೀಡಿರುವ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಯಾವುದೆ ಪ್ರತಿಭಟನೆ, ಮುಷ್ಕರಕ್ಕೆ ಮುಂದಾಗಬಾರದು ಎಂದು ಖಡಕ್ ಸೂಚನೆ ನೀಡಿದೆ.






















