SK Home Ad
Home ಸುದ್ದಿ ರಾಜ್ಯ ಮಹಿಳಾ ಸಚಿವರಿಲ್ಲದ DK ಸರ್ಕಾರ: ಚರ್ಚೆಗೆ ಗ್ರಾಸವಾದ ಸಂಪುಟ

ಮಹಿಳಾ ಸಚಿವರಿಲ್ಲದ DK ಸರ್ಕಾರ: ಚರ್ಚೆಗೆ ಗ್ರಾಸವಾದ ಸಂಪುಟ

0
121

ಡಿಕೆ ಶಿವಕುಮಾರ್ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ; ಮಾರ್ಗರೆಟ್ ಆಳ್ವಾ ಅಸಮಾಧಾನ, ಬಿಜೆಪಿ ಟೀಕೆ

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರದ ಮೊದಲ ಹಂತದ ಸಚಿವ ಸಂಪುಟ ರಚನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿವಿಧ ಜಾತಿ, ಸಮುದಾಯ ಮತ್ತು ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೂ, ಒಬ್ಬ ಮಹಿಳಾ ಶಾಸಕಿಯೂ ಸಂಪುಟದಲ್ಲಿ ಸ್ಥಾನ ಪಡೆಯದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾರ್ಗರೆಟ್ ಆಳ್ವಾ ಬೇಸರ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಮಾರ್ಗರೆಟ್ ಆಳ್ವಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಚಿವ ಸಂಪುಟಕ್ಕೆ ಶುಭಾಶಯ ಕೋರಿದ್ದಾರೆ. ಆದರೆ ಮೊದಲ ಹಂತದ ಸಂಪುಟದಲ್ಲಿ ಕನಿಷ್ಠ ಒಬ್ಬ ಮಹಿಳಾ ಕಾಂಗ್ರೆಸ್ ಪ್ರತಿನಿಧಿಗೆ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಿದ್ದೆ. ಮಹಿಳೆಯರಿಗೆ ಸಂಪೂರ್ಣವಾಗಿ ಅವಕಾಶ ನೀಡದಿರುವುದು ನಿರಾಶೆ ತಂದಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಮಹಿಳಾ ಸಬಲೀಕರಣದ ಬಗ್ಗೆ ನಿರಂತರವಾಗಿ ಮಾತನಾಡುತ್ತಿರುವ ಸಂದರ್ಭದಲ್ಲಿ ಸಂಪುಟದಲ್ಲಿ ಮಹಿಳೆಯರ ಗೈರುಹಾಜರಾತಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

BJP ಟೀಕೆ: ನೂತನ ಸಂಪುಟ ರಚನೆ ಕುರಿತು ಪ್ರತಿಪಕ್ಷ ನಾಯಕ R. ಅಶೋಕ ತೀವ್ರ ಟೀಕೆ ಮಾಡಿದ್ದಾರೆ. “ಸಂಪುಟದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಹೊಸ ಮುಖಗಳಿಗೂ ಅವಕಾಶ ಸಿಕ್ಕಿಲ್ಲ. ನಿನ್ನೆ ನಡೆದ ಪ್ರಮಾಣ ವಚನ ಕಾರ್ಯಕ್ರಮ ಹಳೆಯ ಸಿನಿಮಾದ ಹೊಸ ಪೋಸ್ಟರ್‌ನಂತಿತ್ತು. ರಾಜ್ಯದ ಜನರು ಬದಲಾವಣೆ ನಿರೀಕ್ಷಿಸಿದ್ದರು. ಆದರೆ ಮುಖ್ಯಮಂತ್ರಿಗಳ ನಿವಾಸದ ನೇಮ್‌ ಪ್ಲೇಟ್ ಬದಲಾದುದನ್ನು ಹೊರತುಪಡಿಸಿ ಇನ್ನೇನೂ ಬದಲಾಗಿಲ್ಲ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಮಹಿಳಾ ನಾಯಕರ ಹೆಸರುಗಳು ಕೇಳಿಬಂದಿದ್ದವು : ಮೊದಲ ಹಂತದ ಸಂಪುಟ ರಚನೆಗೂ ಮುನ್ನ ಹಲವು ಮಹಿಳಾ ಶಾಸಕರ ಹೆಸರುಗಳು ಸಚಿವ ಸ್ಥಾನಕ್ಕೆ ಕೇಳಿಬಂದಿದ್ದವು. ಕಾಂಗ್ರೆಸ್ ಪಕ್ಷದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ರೂಪಕಲಾ ಶಶಿಧರ್, ನಯನಾ ಮೋಟಮ್ಮ ಹಾಗೂ ಖನೀಜ್ ಫಾತಿಮಾ ಪ್ರಮುಖ ಮಹಿಳಾ ಶಾಸಕರಾಗಿದ್ದಾರೆ. ಇದರ ಜೊತೆಗೆ ಬಲ್ಕೀಸ್ ಬಾನು, ಆರತಿ ಕೃಷ್ಣ ಮತ್ತು ಉಮಾಶ್ರೀ ಅವರಂತಹ ಪ್ರಭಾವಿ ವಿಧಾನ ಪರಿಷತ್ ಸದಸ್ಯೆಯರ ಹೆಸರೂ ಚರ್ಚೆಯಲ್ಲಿತ್ತು.

ವಿಶೇಷವಾಗಿ ಕೆಜಿಎಫ್ ಕ್ಷೇತ್ರದ ಶಾಸಕಿಯಾಗಿರುವ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಮಹಿಳಾ ಪ್ರತಿನಿಧ್ಯಕ್ಕಾಗಿ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಆದರೆ ಅಂತಿಮವಾಗಿ ಪ್ರಕಟವಾದ ಮೊದಲ ಪಟ್ಟಿಯಲ್ಲಿ ಯಾವುದೇ ಮಹಿಳಾ ನಾಯಕಿಗೆ ಅವಕಾಶ ದೊರೆಯಲಿಲ್ಲ.

ಇನ್ನೂ 20 ಸಚಿವ ಸ್ಥಾನಗಳು ಖಾಲಿ : ಪ್ರಸ್ತುತ ಮುಖ್ಯಮಂತ್ರಿ ಸೇರಿದಂತೆ 14 ಸದಸ್ಯರ ಮೊದಲ ಹಂತದ ಸಂಪುಟ ರಚನೆಯಾಗಿದ್ದು, ಇನ್ನೂ ಸುಮಾರು 20 ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ವಿಸ್ತರಣೆಯಲ್ಲಿ ಮಹಿಳಾ ನಾಯಕರಿಗೆ ಸ್ಥಾನ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

DK ಶಿವಕುಮಾರ್ ಪ್ರತಿಕ್ರಿಯೆ: ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವ ಕುರಿತು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಪ್ರತಿಕ್ರಿಯಿಸಿ, ಸಂಪುಟದಲ್ಲಿ ಇನ್ನೂ ಹಲವು ಸ್ಥಾನಗಳು ಖಾಲಿ ಇವೆ ಎಂದು ಹೇಳಿದ್ದಾರೆ. “ನೋಡೋಣ. ಇನ್ನೂ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಸರ್ಕಾರದ ಕೆಲಸ ಒಬ್ಬ ವ್ಯಕ್ತಿಯಿಂದ ನಡೆಯುವುದಿಲ್ಲ. ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಮಹಿಳೆಯರಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ನೋಡಿ. ಮಹಿಳಾ ಸಬಲೀಕರಣದ ವಿಚಾರದಲ್ಲಿ ದೇಶಕ್ಕೇ ಮಾದರಿಯಾಗುವ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.

ರಾಜಕೀಯ ಚರ್ಚೆಗೆ ಕಾರಣವಾದ ಸಂಪುಟ : ಮಹಿಳಾ ಪ್ರತಿನಿಧ್ಯ ಪ್ರಶ್ನೆ ಇದೀಗ ಕಾಂಗ್ರೆಸ್ ಸರ್ಕಾರದ ಮೊದಲ ಪ್ರಮುಖ ರಾಜಕೀಯ ಚರ್ಚೆಯ ವಿಷಯವಾಗಿದೆ. ಒಂದು ಕಡೆ ಕಾಂಗ್ರೆಸ್ ಮಹಿಳಾ ಸಬಲೀಕರಣವನ್ನು ತನ್ನ ಪ್ರಮುಖ ಅಜೆಂಡಾ ಎಂದು ಪ್ರತಿಪಾದಿಸುತ್ತಿದ್ದರೆ, ಮತ್ತೊಂದೆಡೆ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದು ವಿರೋಧ ಪಕ್ಷಗಳಿಗೆ ಟೀಕೆಗೆ ಅವಕಾಶ ಕಲ್ಪಿಸಿದೆ.

ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಹಿಳಾ ನಾಯಕರಿಗೆ ಎಷ್ಟು ಸ್ಥಾನ ದೊರೆಯುತ್ತದೆ ಎಂಬುದರ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.