SK Home Ad
Home ಸುದ್ದಿ ರಾಜ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

0
225

‘ಹೈಕಮಾಂಡ್ ಸೂಚನೆ ಪಾಲಿಸಿದ್ದೇನೆ’: ರಾಜೀನಾಮೆ ಬಳಿಕ ಸಿದ್ದರಾಮಯ್ಯ

ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ರಾಜೀನಾಮೆ ನೀಡಿರುವುದಾಗಿ ಸ್ವತಃ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಗುರುವಾರ ಮಧ್ಯಾಹ್ನ ಲೋಕಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ಹಸ್ತಾಂತರಿಸಿದರು. ರಾಜ್ಯಪಾಲರು ಅಧಿಕೃತ ಪ್ರವಾಸ ನಿಮಿತ್ತ ಇಂದೋರ್‌ಗೆ ತೆರಳಿದ್ದರಿಂದ, ಅವರ ಅನುಪಸ್ಥಿತಿಯಲ್ಲಿ ರಾಜೀನಾಮೆ ಪತ್ರವನ್ನು ವಿಶೇಷ ಕಾರ್ಯದರ್ಶಿಗಳು ಸ್ವೀಕರಿಸಿದರು.

ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲದ ಕಾರಣ ಅವರ ಕಾರ್ಯದರ್ಶಿಗೆ ಪತ್ರ ನೀಡಿದ್ದೇನೆ. ನಿನ್ನೆ ಹೈಕಮಾಂಡ್ ನಾಯಕರು ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಪಕ್ಷದ ತೀರ್ಮಾನಕ್ಕೆ ಗೌರವ ನೀಡಿ ನಾನು ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದರು.

ಕಳೆದ ಕೆಲವು ವಾರಗಳಿಂದ ಕಾಂಗ್ರೆಸ್ ಒಳಗೆ ನಾಯಕತ್ವ ಬದಲಾವಣೆ ಕುರಿತು ರಾಜಕೀಯ ಚರ್ಚೆಗಳು ತೀವ್ರಗೊಂಡಿದ್ದವು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆಗಳು ನಡೆದಿದ್ದವು.

ಸಿದ್ದರಾಮಯ್ಯ ಅವರ ರಾಜೀನಾಮೆಯೊಂದಿಗೆ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಹೈಕಮಾಂಡ್ ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಶೀಘ್ರದಲ್ಲೇ ಕರೆಯುವ ನಿರೀಕ್ಷೆಯಿದೆ.

ರಾಜಕೀಯವಾಗಿ ದೀರ್ಘ ಪಯಣ ಹೊಂದಿರುವ ಸಿದ್ದರಾಮಯ್ಯ ಅವರು ಸಮಾಜವಾದಿ ಚಿಂತನೆಗಳಿಂದ ಹೊರಹೊಮ್ಮಿ ಕರ್ನಾಟಕ ರಾಜಕೀಯದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದವರು. ಹಿಂದುಳಿದ ವರ್ಗಗಳ ನಾಯಕನಾಗಿ ಗುರುತಿಸಿಕೊಂಡಿರುವ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಆಡಳಿತಾತ್ಮಕ ನಿರ್ಧಾರಗಳ ಮೂಲಕ ತಮ್ಮ ಆಡಳಿತವನ್ನು ಗುರುತಿಸಿಕೊಂಡಿದ್ದರು.

ಮೂಲಗಳ ಪ್ರಕಾರ, ರಾಜ್ಯಪಾಲರು ಇಂದು ರಾತ್ರಿ ಬೆಂಗಳೂರಿಗೆ ಮರಳುವ ಸಾಧ್ಯತೆ ಇದ್ದು, ಅವರ ಆಗಮನದ ಬಳಿಕವೇ ರಾಜೀನಾಮೆ ಅಂಗೀಕಾರದ ಅಂತಿಮ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಮಹತ್ವದ ತಿರುವು ಪಡೆದಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.