ಬೆಂಗಳೂರು: ರಾಜ್ಯದಲ್ಲಿ ಸಿಇಟಿ (CET) ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಜನಿವಾರ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾಗಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಡಕ್ ಪತ್ರ ಬರೆದು ದೂರು ನೀಡಿದೆ.
ಏನಿದು ಘಟನೆ?: ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ, ಆನಂದ್ ಸುಧೀರ್ ರಾವ್ ಎಂಬ ವಿದ್ಯಾರ್ಥಿ ಸೇರಿದಂತೆ ಐದಕ್ಕೂ ಹೆಚ್ಚು ಬ್ರಾಹ್ಮಣ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಬಿಡುವ ಮುನ್ನ, ಭದ್ರತಾ ಸಿಬ್ಬಂದಿ ಅವರ ಜನಿವಾರವನ್ನು ತೆಗೆಸಿದ್ದಾರೆ. ಪರೀಕ್ಷಾ ಮಾರ್ಗಸೂಚಿಯಲ್ಲಿ ಜನಿವಾರ ತೆಗೆಸುವ ಬಗ್ಗೆ ಯಾವುದೇ ಅಧಿಕೃತ ನಿಯಮವಿಲ್ಲದಿದ್ದರೂ, ಸಿಬ್ಬಂದಿ ಹೀಗೆ ವರ್ತಿಸಿರುವುದು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ತೀವ್ರ ಮಾನಸಿಕ ಕಿರುಕುಳ ಉಂಟುಮಾಡಿದೆ.
ಮಹಾಸಭಾ ಆಗ್ರಹವೇನು?: ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್, ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ನೇರ ಹಲ್ಲೆ ಎಂದು ಕಿಡಿಕಾರಿದ್ದಾರೆ. “ಯಾವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆಯೋ, ಆ ಕಾಲೇಜಿನ ಲೈಸೆನ್ಸ್ (ಪರವಾನಗಿ) ಅನ್ನು ತಕ್ಷಣವೇ ರದ್ದು ಮಾಡಬೇಕು. ಅಲ್ಲದೆ, ಆ ಆಡಳಿತ ಮಂಡಳಿಗೆ ಕನಿಷ್ಠ 25 ಲಕ್ಷ ರೂಪಾಯಿಗಳ ದಂಡ ವಿಧಿಸಬೇಕು” ಎಂದು ಸಿಎಂಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಮಡಿವಾಳ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮುಂದುವರಿದ ಹೋರಾಟದ ಎಚ್ಚರಿಕೆ : ಕಳೆದ ವರ್ಷ ಕೂಡ ಇದೇ ರೀತಿಯ ಘಟನೆ ನಡೆದಾಗ ಮಹಾಸಭಾ ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ, ‘ಮತ್ತೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ’ ಎಂದು ಡಿಸೆಂಬರ್ 2025ರಲ್ಲಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಸರ್ಕಾರದ ಆದೇಶವನ್ನು ಪರೀಕ್ಷಾ ಕೇಂದ್ರಗಳು ಗಾಳಿಗೆ ತೂರಿವೆ. ಕೇವಲ ಬೆಂಗಳೂರು ಮಾತ್ರವಲ್ಲದೆ, ಚಿಕ್ಕಬಳ್ಳಾಪುರದ ಪರೀಕ್ಷಾ ಕೇಂದ್ರವೊಂದರಲ್ಲೂ ಇದೇ ರೀತಿ ಜನಿವಾರ ತೆಗೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. “ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಮಹಾಸಭಾ ಎಚ್ಚರಿಕೆ ನೀಡಿದೆ.























