SK Home Ad
Home ಸುದ್ದಿ ವಿದೇಶ ಇಂಧನ ಕೊರತೆ : ನೇಪಾಳದಲ್ಲಿ ವಾರಕ್ಕೆ ಎರಡು ದಿನ ರಜೆ ಘೋಷಣೆ

ಇಂಧನ ಕೊರತೆ : ನೇಪಾಳದಲ್ಲಿ ವಾರಕ್ಕೆ ಎರಡು ದಿನ ರಜೆ ಘೋಷಣೆ

0
408

ಕಠ್ಮಂಡು: ಇರಾನ್ ಪ್ರದೇಶದ ಸಂಘರ್ಷದ ಪರಿಣಾಮವಾಗಿ ಉಂಟಾದ ಇಂಧನ ಕೊರತೆಯಿಂದ ನೇಪಾಳ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರಿ ಕಚೇರಿಗಳಿಗೆ ವಾರಕ್ಕೆ ಎರಡು ದಿನ ರಜೆ ಘೋಷಿಸಲಾಗಿದೆ. ಹಿಂದಿನಂತೆ ಒಂದು ದಿನ ಮಾತ್ರ ರಜೆ ಇದ್ದ ವ್ಯವಸ್ಥೆಯನ್ನು ಬದಲಿಸಿ, ಇನ್ನು ಮುಂದೆ ಶನಿವಾರ ಮತ್ತು ಭಾನುವಾರ ಎರಡೂ ದಿನಗಳನ್ನು ವಾರಾಂತ್ಯ ರಜಾದಿನಗಳಾಗಿ ಘೋಷಿಸಲಾಗಿದೆ.

ಇಂಧನ ಕೊರತೆಯ ಪರಿಣಾಮ: ಇರಾನ್ ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ದೇಶದಲ್ಲಿ ಇಂಧನ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಯಾಚರಣೆ ವೆಚ್ಚ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಂಡಿದೆ.

ಕೆಲಸದ ವೇಳೆಯಲ್ಲಿ ಬದಲಾವಣೆ : ಸರ್ಕಾರಿ ವಕ್ತಾರೆ ಸಸ್ಮಿತಾ ಪೋಖರೆಲ್ ತಿಳಿಸಿರುವಂತೆ ಹೊಸ ನಿಯಮದಂತೆ ಕಚೇರಿ ಸಮಯವು ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ನಡೆಯಲಿವೆ, ಈ ಮೊದಲು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಕೆಲಸದ ಅವಧಿ ಇತ್ತು. ಒಂದು ಗಂಟೆ ಹೆಚ್ಚಿಸಿ ವಾರದ ಕೆಲಸದ ದಿನಗಳನ್ನು ಕಡಿಮೆ ಮಾಡಲಾಗಿದೆ.

ಶಿಕ್ಷಣ ಸಂಸ್ಥೆಗಳಿಗೂ ಅನ್ವಯ : ಹೊಸ ವ್ಯವಸ್ಥೆಯ ಪ್ರಕಾರ ಶನಿವಾರ ಮತ್ತು ಭಾನುವಾರ ಎರಡೂ ದಿನಗಳಂದು ಸರ್ಕಾರಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಆದರೆ ಕಚೇರಿಗಳು ಉಳಿದ ದಿನಗಳಲ್ಲಿ ವಿಸ್ತೃತ ಸಮಯದಲ್ಲಿ ಕಾರ್ಯನಿರ್ವಹಿಸಲಿವೆ.

ಹೊಸ ಕೆಲಸದ ವೇಳಾಪಟ್ಟಿ ಸೋಮವಾರದಿಂದ ಜಾರಿಗೆ ಬಂದಿದೆ. ಸರ್ಕಾರದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇಂಧನ ಉಳಿತಾಯಕ್ಕೆ ಇದು ಸೂಕ್ತ ಕ್ರಮ ಎಂದು ಹೇಳಿದರೆ, ಇತರರು ಸೇವೆಗಳ ಲಭ್ಯತೆಯಲ್ಲಿ ವಿಳಂಬ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.