SK Home Ad
Home ಸುದ್ದಿ ವಿದೇಶ ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಗೆ ಚಾಕು ಇರಿದು ಹತ್ಯೆ

ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಗೆ ಚಾಕು ಇರಿದು ಹತ್ಯೆ

0
67

ಕೆನಡಾದಲ್ಲಿ ಭಾರತೀಯರ ಮೇಲಿನ ದಾಳಿ ಮುಂದುವರಿಕೆ; ಮತ್ತೊಬ್ಬ ವಿದ್ಯಾರ್ಥಿನಿ ಬಲಿ

ಒಟ್ಟಾವಾ: ಕೆನಡಾದ ನಯಾಗ್ರಾ ಪ್ರದೇಶದಲ್ಲಿ ಗುಜರಾತ್ ಮೂಲದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ದುಷ್ಕರ್ಮಿಯ ಚಾಕು ದಾಳಿಗೆ ಬಲಿಯಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿನಿಯನ್ನು ವಿಧಿ ಮೇಘಾ (22) ಎಂದು ಗುರುತಿಸಲಾಗಿದ್ದು, ಆಕೆ ಗುಜರಾತ್‌ನ ಆನಂದ್ ಜಿಲ್ಲೆಯ ಬೊರ್ಸಾದ್ ಮೂಲದವಳಾಗಿದ್ದಾಳೆ.

ಕಳೆದ ನಾಲ್ಕು ವರ್ಷಗಳಿಂದ ಕೆನಡಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ವಿಧಿ, ಓದಿನ ಜೊತೆಗೆ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದಳು. ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ನಡುರಸ್ತೆಯಲ್ಲೇ ದುಷ್ಕರ್ಮಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ವಿಧಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಪ್ರಾಥಮಿಕ ತನಿಖೆಯ ಪ್ರಕಾರ, ದರೋಡೆ ಯತ್ನದ ವೇಳೆ ಈ ಹತ್ಯೆ ನಡೆದಿರಬಹುದು ಎಂದು ಕೆನಡಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಮೇ 16ರಿಂದ ವಿಧಿ ತನ್ನ ಕುಟುಂಬದವರ ಸಂಪರ್ಕಕ್ಕೆ ಬಂದಿರಲಿಲ್ಲ. ಓದು ಮತ್ತು ಕೆಲಸದಲ್ಲಿ ನಿರತರಾಗಿದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಬಳಿಕ ಕೆನಡಾ ಅಧಿಕಾರಿಗಳಿಂದ ವಿಧಿ ಸಾವಿನ ಮಾಹಿತಿ ತಿಳಿದು ಕುಟುಂಬ ಆಘಾತಕ್ಕೊಳಗಾಗಿದೆ.

ವಿಧಿ ಅವರ ಸಾವಿನ ಸುದ್ದಿ ಬೊರ್ಸಾದ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುಃಖದ ವಾತಾವರಣ ನಿರ್ಮಿಸಿದೆ. ಆಕೆಯನ್ನು ಪರಿಚಯಸ್ಥರು ಹಾಗೂ ಸ್ನೇಹಿತರು ಅತ್ಯಂತ ಪರಿಶ್ರಮಿ ಮತ್ತು ಮಹತ್ವಾಕಾಂಕ್ಷೆಯ ಯುವತಿಯಾಗಿ ಬಣ್ಣಿಸಿದ್ದಾರೆ. ಕೆನಡಾದಲ್ಲಿ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳುವ ಕನಸಿನೊಂದಿಗೆ ಆಕೆ ಶ್ರಮಿಸುತ್ತಿದ್ದಳು ಎಂದು ಹೇಳಿದ್ದಾರೆ.

ಈ ಘಟನೆ ವಿದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಕುರಿತ ಆತಂಕವನ್ನು ಮತ್ತೊಮ್ಮೆ ಹೆಚ್ಚಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು ಮತ್ತು ನಿವಾಸಿಗಳ ಮೇಲೆ ದಾಳಿ, ದರೋಡೆ ಹಾಗೂ ಹಿಂಸಾತ್ಮಕ ಘಟನೆಗಳು ಹೆಚ್ಚುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗಷ್ಟೇ ಬ್ರಿಟಿಷ್ ಕೊಲಂಬಿಯಾದ ಫೋರ್ಟ್ ಸೇಂಟ್ ಜಾನ್‌ನಲ್ಲಿ ಮಧ್ಯಪ್ರದೇಶ ಮೂಲದ ವಿದ್ಯಾರ್ಥಿ ಗುರುಕಿರತ್ ಸಿಂಗ್ ಮನೋಚಾ ಮೇಲೂ ದಾಳಿ ನಡೆದಿತ್ತು. ಹಳೆಯ ವೈಷಮ್ಯದ ಹಿನ್ನೆಲೆ 10 ರಿಂದ 12 ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿ ಬಳಿಕ ವಾಹನ ಡಿಕ್ಕಿ ಹೊಡೆಸಿದೆ ಎಂದು ಕುಟುಂಬ ಆರೋಪಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ನಂತರ ಮೃತಪಟ್ಟಿದ್ದರು.

ಈ ಸರಣಿ ಘಟನೆಗಳು ವಿದೇಶಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ತೆರಳಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. ವಿಧಿ ಮೇಘಾ ಪ್ರಕರಣದ ತನಿಖೆಯನ್ನು ಕೆನಡಾ ಪೊಲೀಸರು ಮುಂದುವರಿಸಿದ್ದು, ಆರೋಪಿಯಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಇದೇ ವೇಳೆ, ವಿಧಿ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಹಾಗೂ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.