Home Advertisement
Home ಸುದ್ದಿ ದೇಶ ರಾಘವ್ ಚಡ್ಡಾ ಬಿಜೆಪಿ ಸೇರ್ಪಡೆ: ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷ ಫಾಲೋವರ್ಸ್ ಕಳೆದುಕೊಂಡ ಯುವ ನಾಯಕ!

ರಾಘವ್ ಚಡ್ಡಾ ಬಿಜೆಪಿ ಸೇರ್ಪಡೆ: ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷ ಫಾಲೋವರ್ಸ್ ಕಳೆದುಕೊಂಡ ಯುವ ನಾಯಕ!

0
21

ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಭಾವಿ ಯುವ ನಾಯಕ ರಾಘವ್ ಚಡ್ಡಾ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಇನ್‌ಸ್ಟಾಗ್ರಾಮ್‌ ಬರೋಬ್ಬರಿ 1 ಮಿಲಿಯನ್ (10 ಲಕ್ಷ) ಫಾಲೋವಿಂಗ್ಸ್ ಕಳೆದುಕೊಳ್ಳುವ ಮೂಲಕ ಡಿಜಿಟಲ್ ಲೋಕದಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದಾರೆ.

ಶುಕ್ರವಾರದವರೆಗೆ 14.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಚಡ್ಡಾ ಸಂಖ್ಯೆ, ಶನಿವಾರ ಮಧ್ಯಾಹ್ನದ ವೇಳೆಗೆ 13.5 ಮಿಲಿಯನ್‌ಗೆ ಕುಸಿದಿದೆ. ಬಿಜೆಪಿಗೆ ಸೇರಿದ ನಿರ್ಧಾರವನ್ನು ವಿರೋಧಿಸಿ ನೆಟ್ಟಿಗರು #unfollowRaghavChadha ಎಂಬ ಅಭಿಯಾನ ಆರಂಭಿಸಿದ್ದು, ಇದು ಯುವ ಮತದಾರರ ಅಸಮಾಧಾನವನ್ನು ಪ್ರತಿಬಿಂಬಿಸುತ್ತಿದೆ.

ಅಚ್ಚರಿಯೇನಲ್ಲದ ರಾಜಕೀಯ ನಡೆ: ರಾಜ್ಯಸಭೆಯಲ್ಲಿ ಎಎಪಿಯ ಉಪ ನಾಯಕನ ಸ್ಥಾನದಿಂದ ಚಡ್ಡಾರವರನ್ನ ಇತ್ತೀಚೆಗೆ ತೆಗೆದುಹಾಕಲಾಗಿತ್ತು. ಇದು ಪಕ್ಷದ ಒಳಗಿನ ಭಿನ್ನಮತದ ಮುನ್ಸೂಚನೆ ನೀಡಿತ್ತು. ಇದೀಗ ತಮ್ಮ ಬೆಂಬಲಿಗ ಸಂಸದರೊಂದಿಗೆ ಬಿಜೆಪಿ ಸೇರಿರುವುದು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ.

ಯುವಜನರ ‘ಹೀರೋ’ಗೆ ಹಿನ್ನಡೆ ಏಕೆ?: ಸಾಮಾನ್ಯ ರಾಜಕಾರಣಿಗಳಿಗಿಂತ ಭಿನ್ನವಾಗಿ ರಾಘವ್ ಚಡ್ಡಾ ಗಿಗ್ ಕೆಲಸಗಾರರ ಸಮಸ್ಯೆ, ಪಿತೃತ್ವ ರಜೆ ಮತ್ತು ಇಂಟರ್ನೆಟ್ ಮಿತಿಗಳಂತಹ ‘ಜನರಲ್ ಝಡ್’ (Gen Z) ತಲೆಮಾರಿನ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು. ಒಮ್ಮೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಮೂಲಕ ಯುವಜನರ ಮನಗೆದ್ದಿದ್ದರು. ಆದ್ರೆ ಈಗ ಸೈದ್ಧಾಂತಿಕ ಬದಲಾವಣೆಯು ಬೆಂಬಲಿಗರಿಗೆ “ದ್ರೋಹ”ದಂತೆ ಭಾಸವಾಗಿದೆ ಎನ್ನಲಾಗುತ್ತಿದೆ.

ಒಟ್ಟಾರೆಯಾಗಿ ಈ ಘಟನೆಯು ಇಂದಿನ ಡಿಜಿಟಲ್ ಯುಗದಲ್ಲಿ ರಾಜಕಾರಣಿಗಳ ಇಮೇಜ್ ಎಷ್ಟು ಬೇಗ ಬದಲಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಲೈಕ್‌ಗಳು ಮತ್ತು ಶೇರ್‌ಗಳ ಮೂಲಕ ಬೆಳೆದ ನಾಯಕನಿಗೆ, ಈಗ ಅದೇ ಸಾಮಾಜಿಕ ಮಾಧ್ಯಮ ‘ಎರಡು ಅಲಗಿನ ಕತ್ತಿ’ಯಾಗಿ ಪರಿಣಮಿಸಿದೆ.