ಮುಂಬೈ: ಭಾರತೀಯ ಚಿತ್ರಸಂಗೀತ ಲೋಕದ ಶ್ರೇಷ್ಠ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪುರಸ್ಕೃತ ಸುಮನ್ ಕಲ್ಯಾಣಪುರ್ (89) ಭಾನುವಾರ (ಮೇ 31) ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದರು.
ಮೃತರು ಪುತ್ರಿ ಚಾರುಲ್ ಅಗ್ನಿ ಸೇರಿದಂತೆ ಅಪಾರ ಬಂಧುಬಳಗ ಹಾಗೂ ಕೋಟ್ಯಂತರ ಸಂಗೀತಪ್ರೇಮಿಗಳನ್ನು ಅಗಲಿದ್ದಾರೆ. ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1950 ರಿಂದ 70ರ ದಶಕದವರೆಗೆ ಹಿಂದಿ, ಮರಾಠಿ, ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಮಧುರ ಗೀತೆಗಳಿಗೆ ಧ್ವನಿಯಾಗಿದ್ದ ಅವರ ನಿಧನಕ್ಕೆ ಚಿತ್ರರಂಗ ಹಾಗೂ ಸಂಗೀತಲೋಕದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ತಂದೆ ಶಂಕರರಾವ್ ಹೆಮ್ಮಾಡಿ ಅವರು ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ‘ಹೆಮ್ಮಾಡಿ’ ಗ್ರಾಮದವರು. ಬ್ಯಾಂಕ್ ಅಧಿಕಾರಿಯಾಗಿದ್ದ ಅವರಿಗೆ ಅಂದಿನ ಅವಿಭಜಿತ ಭಾರತದ ಢಾಕಾ (ಪ್ರಸ್ತುತ ಬಾಂಗ್ಲಾದೇಶ) ನಗರಕ್ಕೆ ವರ್ಗಾವಣೆಯಾಗಿದ್ದರಿಂದ, ಅಲ್ಲಿಯೇ 1937ರ ಜನವರಿ 28ರಂದು ಸುಮನ್ ಅವರು ಜನಿಸಿದರು. ಅವರ ಮೂಲ ಹೆಸರು ಸುಮನ್ ಹೆಮ್ಮಾಡಿ. 1943ರಲ್ಲಿ ಅವರ ಕುಟುಂಬ ಮುಂಬೈಗೆ ವಲಸೆ ಬಂದಿತು.
ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಸುಮನ್ ಮುಂಬೈನ ಪ್ರಸಿದ್ಧ ‘ಸರ್ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್’ ಸೇರಿದರಾದರೂ, ಅವರ ಭವಿಷ್ಯ ಸಂಗೀತಕ್ಷೇತ್ರದಲ್ಲಿತ್ತು. ಪಂಡಿತ್ ಕೇಶವರಾವ್ ಭೋಲೆ ಮತ್ತು ಉಸ್ತಾದ್ ಅಬ್ದುಲ್ ರೆಹಮಾನ್ ಖಾನ್ ಅವರ ಬಳಿ ಕೈಗೊಂಡ ಶಾಸ್ತ್ರೀಯ ಸಂಗೀತದ ಅಭ್ಯಾಸ ಅವರ ಗಾಯನಕ್ಕೆ ಭದ್ರ ಬುನಾದಿ ಹಾಕಿತು. 1958ರಲ್ಲಿ ಉದ್ಯಮಿ ರಮಾನಂದ್ ಕಲ್ಯಾಣಪುರ್ ಅವರನ್ನು ವಿವಾಹವಾದ ನಂತರ ಅವರು ‘ಸುಮನ್ ಕಲ್ಯಾಣಪುರ್’ ಆದರು.
ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಎಂಬ ಇಬ್ಬರು ದೈತ್ಯಪ್ರತಿಭೆಗಳ ನಡುವೆ ತಮ್ಮದೇ ಆದ ವಿಶಿಷ್ಟ ಧ್ವನಿ ಹಾಗೂ ಶ್ರುತಿಬದ್ಧ ಗಾಯನದ ಮೂಲಕ ಛಾಪು ಮೂಡಿಸಿದವರು ಸುಮನ್ ಕಲ್ಯಾಣಪುರ್. 1953ರ ಮರಾಠಿ ಚಿತ್ರ ‘ಶುಕ್ರಾಚಿ ಚಾಂದನಿ’ ಮೂಲಕ ಹಿನ್ನೆಲೆ ಗಾಯಕಿಯಾಗಿ ಪ್ರವೇಶಿಸಿದ ಸುಮನ್ ಅವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದು ಗಜಲ್ ಸಾಮ್ರಾಟ್ ತಲತ್ ಮಹಮೂದ್. ರೇಡಿಯೋದಲ್ಲಿ ಹಾಡು ಕೇಳುವಾಗ ಲತಾ ಅವರೇ ಹಾಡಿದ್ದಾರೆ ಎಂದು ಶ್ರೋತೃಗಳು ಭ್ರಮಿಸುವಷ್ಟು ಸುಮನ್ ಹಾಗೂ ಲತಾ ಮಂಗೇಶ್ಕರ್ ಧ್ವನಿ ಸಾಮ್ಯತೆ ಇತ್ತು.
ಹಿಂದಿ ಮತ್ತು ಮರಾಠಿ ಮಾತ್ರವಲ್ಲದೆ ಬಂಗಾಳಿ, ಗುಜರಾತಿ, ಪಂಜಾಬಿ ಸೇರಿದಂತೆ ಹಲವು ಭಾಷೆಗಳಲ್ಲಿ 740ಕ್ಕೂ ಹೆಚ್ಚು ಗೀತೆಗಳನ್ನು ಅವರು ಹಾಡಿದ್ದಾರೆ. ಅದರಲ್ಲಿ 2023ರಲ್ಲಿ ಭಾರತ ಸರ್ಕಾರ ನೀಡಿದ ಪದ್ಮಭೂಷಣ ಪ್ರಮುಖವಾದದ್ದು.
ಆಡಂಬರ ಹಾಗೂ ಪ್ರಚಾರಪ್ರಿಯತೆಯಿಂದ ದೂರವಿದ್ದು, ಕೇವಲ ತಮ್ಮ ಕಂಠಮಾಧುರ್ಯ ಮತ್ತು ಸೌಮ್ಯ ಸ್ವಭಾವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರ ನಿಧನದಿಂದ ಹಿನ್ನೆಲೆ ಸಂಗೀತದ ಸುಮಧುರ ಕೊಂಡಿಯೊಂದು ಕಳಚಿದಂತಾಗಿದೆ.




















