ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಕಣವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿಗಳು ಮತ್ತು ಆಪ್ತರನ್ನು ಗುರಿಯಾಗಿಸಿಕೊಂಡು ನಡೆದಿರುವ ಆದಾಯ ತೆರಿಗೆ (ಐಟಿ) ಇಲಾಖೆಯ ದಾಳಿಯು ರಾಜ್ಯದಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ ಎನ್ನಲಾಗುತ್ತಿದೆ.
ಕೋಲ್ಕತ್ತಾದ ರಾಶ್ ಬೆಹಾರಿ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ದೇಬಾಶಿಶ್ ಕುಮಾರ್ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಿರಾಜ್ ಶಾ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಚುನಾವಣಾ ಅಖಾಡ ಸಿದ್ಧವಾಗಿರುವ ಈ ನಿರ್ಣಾಯಕ ಸಮಯದಲ್ಲಿ ನಡೆದಿರುವ ಈ ಕಾರ್ಯಾಚರಣೆಯು ರಾಜಕೀಯ ವಲಯದಲ್ಲಿ ಬಹಳ ಸಂಚಲನ ಮೂಡಿಸಿದೆ.
ಹಾಗೇ ಈ ಬೆಳವಣಿಗೆಯಿಂದ ಕೆರಳಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಬೆದರಿಸುವ ತಂತ್ರ ಫಲಿಸದು. ನಿಮಗೆ ತಾಕತ್ತಿದ್ದರೆ ನೇರವಾಗಿ ಚುನಾವಣಾ ರಣರಂಗಕ್ಕೆ ಬನ್ನಿ, ತನಿಖಾ ಸಂಸ್ಥೆಗಳ ಹಿಂದೆ ಅಡಗಬೇಡಿ” ಎಂದು ಸಿಡಿಲ ಗುಡುಗು ಗುಡುಗಿದ್ದಾರೆ. ತನಿಖಾ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡು ಬಿಜೆಪಿ ಕೈಗೊಂಬೆಗಳಂತೆ ವರ್ತಿಸುತ್ತಿದ್ದೀರಿ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಚುನಾವಣೆಗೆ ಇನ್ನೂ ಕೆಲವೇ ದಿನಗಳ ಅಂತರ ಇರುವಾಗ ನಡೆದಿರುವ ಈ ದಾಳಿಗಳು ಕೇವಲ ಕಿರುಕುಳ ನೀಡುವ ಉದ್ದೇಶ ಹೊಂದಿವೆ ಎಂದು ಟಿಎಂಸಿ ಕಿಡಿಕಾರಿದೆ. “ಇದು ಪ್ರಜಾಪ್ರಭುತ್ವದ ಮೇಲಿನ ಹಲ್ಲೆ. ಜನರ ಬೆಂಬಲ ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಜೆಪಿ, ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಪಕ್ಷದ ವಕ್ತಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಈ ದಾಳಿಗಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ, ಭ್ರಷ್ಟಾಚಾರದ ವಿರುದ್ಧದ ಕಾನೂನುಬದ್ಧ ಕ್ರಮವಿದು ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಮತದಾನದ ಪ್ರಕ್ರಿಯೆ ಆರಂಭವಾಗುವ ಮುನ್ನವೇ ನಡೆದಿರುವ ಈ ಐಟಿ ದಾಳಿಯು ಬಂಗಾಳದ ಮತದಾರರ ಮೇಲೆ ಎಂತಹ ಪ್ರಭಾವ ಬೀರಲಿದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ. ರಾಜ್ಯದ ಜನರೇ ಈ ‘ರಾಜಕೀಯ ದೌರ್ಜನ್ಯ’ಕ್ಕೆ ಮತದಾನದ ಮೂಲಕ ಉತ್ತರ ನೀಡಲಿದ್ದಾರೆ ಎಂಬುದು ಮಮತಾ ಬ್ಯಾನರ್ಜಿಯವರ ದೃಢ ವಿಶ್ವಾಸವಾಗಿದೆ.






















