ನವದೆಹಲಿ: ಪಶ್ಚಿಮ ರೈಲ್ವೆ ವತಿಯಿಂದ ಬಾಂದ್ರಾ ಟರ್ಮಿನಸ್ ಸಮೀಪ ನಾಲ್ಕು ದಿನಗಳ ಭಾರೀ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಬಾಂಬೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಇಂದಿನಿಂದ (ಮೇ 19) ರಿಂದ ಅಧಿಕೃತವಾಗಿ ಆರಂಭವಾಗಿದೆ. ಇಂದಿನಿಂದ ಸತತ 5 ದಿನಗಳ ಕಾಲ (ಮೇ 23)ರವೆರೆಗೆ ಈ ಕಾರ್ಯಾಚರಣೆ ನಡೆಯಲಿದೆ.
ಸಾಂತಾಕ್ರೂಜ್ ಮತ್ತು ಮುಂಬೈ ಸೆಂಟ್ರಲ್ ನಡುವೆ ರೈಲ್ವೇಯ 5ನೇ ಮತ್ತು 6ನೇ ಲೈನ್‌ಗಳ ವಿಸ್ತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ರೈಲ್ವೇ ಭೂಮಿಯನ್ನು ಮುಕ್ತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಸುರಕ್ಷತಾ ಕ್ರಮಗಳು: ಸ್ಥಳದಲ್ಲಿ ಯಾವುದೇ ಗಲಾಟೆ ನಡೆಯದಂತೆ ತಡೆಯಲು ಮುಂಬೈ ಪೊಲೀಸ್, ಆರ್‌ಪಿಎಫ್ (RPF) ಮತ್ತು ಜಿಆರ್‌ಪಿ (GRP) ಸೇರಿದಂತೆ ಸುಮಾರು 400 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ಅಂಬುಲೆನ್ಸ್‌ಗಳನ್ನೂ ಮುನ್ನೆಚ್ಚರಿಕೆಯಾಗಿ ಸ್ಥಳದಲ್ಲಿ ಇರಿಸಲಾಗಿದೆ.
ಕೋರ್ಟ್ ಆದೇಶ: 2021 ರ ಸಮೀಕ್ಷೆಯ ಪ್ರಕಾರ ಅರ್ಹರಾಗಿರುವ ನಿವಾಸಿಗಳಿಗೆ ಪರ್ಯಾಯ ವಸತಿ (ಪುನರ್ವಸತಿ) ಕಲ್ಪಿಸಬೇಕು ಮತ್ತು ಅನಧಿಕೃತವಾಗಿರುವ ಕಟ್ಟಡಗಳನ್ನು ಮಾತ್ರ ತೆರವುಗೊಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಸುಮಾರು 500 ಮೀಟರ್ ಉದ್ದದ ಹಳಿ ಪ್ರದೇಶವನ್ನು ಸಂಪೂರ್ಣವಾಗಿ ಅತಿಕ್ರಮಣ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶ ರೈಲು ಸುರಕ್ಷತೆಯನ್ನು ಬಲಪಡಿಸುವುದು, ಅತಿಕ್ರಮಣ ಪ್ರದೇಶಗಳಲ್ಲಿ ಸಂಭವಿಸುವ ಅಪಘಾತಗಳು ಹಾಗೂ ಸಾವುಗಳನ್ನು ತಡೆಯುವುದು ಮತ್ತು ಭವಿಷ್ಯದಲ್ಲಿ ಹೊಸ ರೈಲು ಸೇವೆಗಳಿಗೆ ಅಗತ್ಯವಾದ ಭೂಮಿಯನ್ನು ಸಿದ್ಧಗೊಳಿಸುವುದಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಈ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಹೊಸ ರೈಲುಗಳ ಸಂಚಾರ ವ್ಯವಸ್ಥೆ ಮತ್ತು ಉತ್ತಮ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಮುಂಬೈನ ಅತ್ಯಂತ ಜನನಿಬಿಡ ರೈಲು ಜಾಲಗಳಲ್ಲಿ ಒಂದಾದ ಈ ಭಾಗದಲ್ಲಿ ಹಳಿ ಪಕ್ಕದ ಅತಿಕ್ರಮಣಗಳು ಹಲವು ವರ್ಷಗಳಿಂದ ದೊಡ್ಡ ಸಮಸ್ಯೆಯಾಗಿದ್ದವು.
ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ರೈಲ್ವೆ ಭದ್ರತಾ ಪಡೆ ಸಿಬ್ಬಂದಿ ಮತ್ತು ನಾಗರಿಕ ಆಡಳಿತದ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಇದುವರೆಗೆ ಕಾರ್ಯಾಚರಣೆ ಶಾಂತಿಯುತವಾಗಿ ಸಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಅನೇಕ ಕುಟುಂಬಗಳು ತಮ್ಮ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಮನೆ ಕಳೆದುಕೊಳ್ಳುತ್ತಿರುವ ಜನರು ಪುನರ್ವಸತಿ ಕುರಿತು ಸ್ಪಷ್ಟ ಭರವಸೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಮುಂಬೈ ಮೆಟ್ರೋಪಾಲಿಟನ್ ರೀಜನ ಡೆವಲಪ್‌ಮೆಂಟ್ ಅಥಾರಿಟಿ (MMRDA) ವತಿಯಿಂದ ಅರ್ಹರಾಗಿರುವ ಸುಮಾರು 100 ನಿವಾಸಿಗಳಿಗೆ ಪರ್ಯಾಯ ಮನೆಗಳನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಹಲವು ವರ್ಷಗಳಿಂದ ಇಲ್ಲಿ ಕುಟುಂಬಗಳು ವಾಸವಿದ್ದು, ಜೀವನೋಪಾಯ ಕೂಡ ಇದೇ ಪ್ರದೇಶದ ಮೇಲೆ ಅವಲಂಬಿತವಾಗಿದೆ. ಆದರೂ ರೈಲ್ವೆ ಸುರಕ್ಷತೆ ಮತ್ತು ನಗರ ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಈ ಕಾರ್ಯಾಚರಣೆ ಮುಂಬೈ ನಗರದಲ್ಲಿ ಅತಿಕ್ರಮಣ ತೆರವು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಡುವೆ ಸಮತೋಲನ ಸಾಧಿಸುವ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.




















