Home Advertisement
Home ಸಿನಿ ಮಿಲ್ಸ್ “ದೇವರಿದ್ದಾನೆ ಹುಷಾರಾಗಿರಿ”: ನಟ ದಿಲೀಪ್ ರಾಜ್ ಪತ್ನಿಯ ಒಡಲ ಬೇಗುದಿಗೆ ನೆಟ್ಟಿಗರು ಭಾವುಕ!

“ದೇವರಿದ್ದಾನೆ ಹುಷಾರಾಗಿರಿ”: ನಟ ದಿಲೀಪ್ ರಾಜ್ ಪತ್ನಿಯ ಒಡಲ ಬೇಗುದಿಗೆ ನೆಟ್ಟಿಗರು ಭಾವುಕ!

0
65

ಬೆಂಗಳೂರು: ಚಂದನವನದ ಖ್ಯಾತ ನಟ ದಿಲೀಪ್ ರಾಜ್‌ ಹಠಾತ್ ನಿಧನ ಇಡೀ ಚಿತ್ರರಂಗ ಹಾಗೂ ಅಭಿಮಾನಿ ಬಳಗಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಮೇ 13ರಂದು ಹೃದಯಾಘಾತದಿಂದ ನಿಧನರಾದ 47 ವರ್ಷದ ನಟ, ಜಿಮ್ ಮತ್ತು ವರ್ಕೌಟ್ ಸೇರಿದಂತೆ ಅತ್ಯಂತ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರು. ಆದರೂ ವಿಧಿಯ ಆಟಕ್ಕೆ ಅವರು ಬಲಿಯಾಗಿದ್ದು, ಸಾವಿನ ನೋವಿನಿಂದ ಹೊರಬರಲಾಗದೆ ಪತ್ನಿ ಶ್ರೀವಿದ್ಯಾ ಸಾಮಾಜಿಕ ಜಾಲತಾಣದಲ್ಲಿ ದೇವರ ವಿರುದ್ಧ ತೀವ್ರ ಬೇಸರ ಮತ್ತು ಆಕ್ರೋಶ ಹೊರಹಾಕಿದ್ದಾರೆ.

ಪತಿಯನ್ನು ಕಳೆದುಕೊಂಡು ಕಣ್ಣೀರ ಕಡಲಿನಲ್ಲಿ ಮುಳುಗಿರುವ ಶ್ರೀವಿದ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಪ್ರೀತಿಯಿಂದ ಬಾಳುತ್ತಿದ್ದ ತಮ್ಮ ಸಂಸಾರವನ್ನು ದೇವರು ಅರ್ಧಕ್ಕೆ ನುಜ್ಜುಗುಜ್ಜು ಮಾಡಿದ ನೋವಿನಲ್ಲಿ ಭಾವುಕರಾಗಿ ಪೋಸ್ಟ್ ಬರೆದುಕೊಂಡಿದ್ದಾರೆ.

“ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ, ಒಂದು ಸಂಸಾರ ಅಂದಮೇಲೆ ಒಬ್ಬ ಗಂಡ ಹೆಂಡತಿಯನ್ನು ಯಾವಾಗಲೂ ಹೊಡೆಯುತ್ತಿರಬೇಕು, ಕುಡಿದು ಬಂದು ಗಲಾಟೆ ಮಾಡುತ್ತಿರಬೇಕು. ಹೆಂಡತಿಯೂ ಯಾವಾಗಲೂ ಗಂಡನನ್ನೇ ದೂಷಿಸುತ್ತಿರಬೇಕು. ಮಕ್ಕಳು ತಂದೆ-ತಾಯಿಯನ್ನು ಗೌರವಿಸಬಾರದು, ಹೆತ್ತವರೂ ಮಕ್ಕಳನ್ನು ಬೈಯುತ್ತಿರಬೇಕು. ಒಟ್ಟಿನಲ್ಲಿ ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರಬಾರದು. ಒಬ್ಬರಿಗೊಬ್ಬರು ಕಿತ್ತಾಡಿಕೊಂಡೇ ಇರಬೇಕು” ಎಂದು ತೀವ್ರ ನೋವಿನಿಂದ ಬರೆದುಕೊಂಡಿದ್ದಾರೆ.

ಮುಂದುವರಿದು ದೇವರ ಅಸ್ತಿತ್ವದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶ್ರೀವಿದ್ಯಾ, “ದೇವರಿದ್ದಾನೆ, ಹುಷಾರಾಗಿರಿ”, ಯಾರ ಮನೆ ಚೆನ್ನಾಗಿದೆಯೋ, ಯಾರ ಮನೆಯಲ್ಲಿ ಯಾವಾಗಲೂ ನಗು ತುಂಬಿರುತ್ತದೆಯೋ, ಯಾರು ತುಂಬಾ ಖುಷಿಯಿಂದ ಬದುಕುತ್ತಿರುತ್ತಾರೋ, ಅಂಥವರ ಮನೆಯ ಮೇಲೆ ಅವನಿಗೆ (ದೇವರಿಗೆ) ಯಾವಾಗಲೂ ಕಣ್ಣಿರುತ್ತದೆ. ಅವನು ನಿಮ್ಮ ನಗುವಿನ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ, ನಾಶ ಮಾಡದೆ ಬಿಡುವುದಿಲ್ಲ. ದೇವರಿದ್ದಾನೆ ಹುಷಾರಾಗಿರಿ” ಎಂದು ತಮ್ಮ ಒಡಲ ಸಂಕಟವನ್ನು ಹೊರಹಾಕಿದ್ದಾರೆ.

ನೆಮ್ಮದಿಯ ಸಂಸಾರಕ್ಕೆ ಕಣ್ಣಿಟ್ಟ ದೇವರಿಗೆ ಶ್ರೀವಿದ್ಯಾ ಹಾಕಿರುವ ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಪತಿಯನ್ನು ಕಳೆದುಕೊಂಡು ದುಃಖದ ತುತ್ತತುದಿಯಲ್ಲಿರುವ ಶ್ರೀವಿದ್ಯಾ ಸ್ಥಿತಿಗೆ ಕರಗಿರುವ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು, “ಅಮ್ಮಾ ಸಮಾಧಾನ ಮಾಡಿಕೊಳ್ಳಿ, ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನಿಮಗೆ ನೀಡಲಿ” ಎಂದು ಕಮೆಂಟ್‌ಗಳ ಮೂಲಕ ಸಾಂತ್ವನ ಹೇಳುತ್ತಿದ್ದಾರೆ.