SK Home Ad
Home ಸಿನಿ ಮಿಲ್ಸ್ 100 ಕೋಟಿ ರೂಪಾಯಿ ಬೇಡ ಎಂದ ಯಶ್‌; ಸಂಭಾವನೆ ಬದಲು ರಾವಣನ ಪಾತ್ರಕ್ಕೆ ಪಡೆದಿದ್ದು ಏನು?

100 ಕೋಟಿ ರೂಪಾಯಿ ಬೇಡ ಎಂದ ಯಶ್‌; ಸಂಭಾವನೆ ಬದಲು ರಾವಣನ ಪಾತ್ರಕ್ಕೆ ಪಡೆದಿದ್ದು ಏನು?

0
18

ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚಿಗೆ ಟಾಕ್ಸಿಕ್‌ ಸಿನಿಮಾ ಮೂಲಕ ಹೆಚ್ಚು ಚರ್ಚೆಯಲ್ಲಿದ್ದಾರೆ. ಇದಾದ ಬಳಿಕ ಯಶ್ ಶೀಘ್ರದಲ್ಲೇ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್‌ ಕೇವಲ ಈ ಚಿತ್ರದ ನಟ ಮಾತ್ರವಲ್ಲ, ಚಿತ್ರದ ಸಹ-ನಿರ್ಮಾಪಕರೂ ಆಗಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರ ಇದೀಗ ಸಿನಿರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ, ‘ರಾಮಾಯಣ’ ಸಿನಿಮಾದಲ್ಲಿ ನಟಿಸಲು ಯಶ್ ಅವರಿಗೆ ಸುಮಾರು ₹100 ಕೋಟಿ ಆಫರ್ ಇತ್ತು. ಆದರೆ ಈ ಮೊತ್ತವನ್ನು ನೇರವಾಗಿ ಪಡೆಯುವ ಬದಲು, ಸಿನಿಮಾದ ದಕ್ಷಿಣ ಭಾರತದ ವಿತರಣೆ ಹಕ್ಕುಗಳ ಮೇಲೆ ಯಶ್ ಆಸಕ್ತಿ ತೋರಿಸಿದ್ದಾರೆ ಎಂದು ವರದಿಯಾಗಿದೆ.

ಯಶ್ ಅವರ ಈ ನಿರ್ಧಾರ ಕೇವಲ ನಟನೆಯ ಸಂಭಾವನೆಗೆ ಸೀಮಿತವಾಗಿಲ್ಲ. ‘ರಾಮಾಯಣ’ ಸಿನಿಮಾದ ಎರಡೂ ಭಾಗಗಳ ದಕ್ಷಿಣ ಭಾರತದ ಥಿಯೇಟ್ರಿಕಲ್ ಡಿಸ್ಟ್ರಿಬ್ಯೂಷನ್ ಹಕ್ಕುಗಳನ್ನು ಪಡೆಯುವ ಮೂಲಕ ಸಿನಿಮಾದ ಗಳಿಕೆಯಲ್ಲಿ ಪಾಲು ಪಡೆಯುವ ರೀತಿಯಲ್ಲಿ ಮುಂದಾಗಿದ್ದಾರೆ ಎನ್ನಲಾಗಿದೆ.

ದಕ್ಷಿಣ ಭಾಗಗಳಲ್ಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡರೆ, ಈ ಡಿಸ್ಟ್ರಿಬ್ಯೂಷನ್ ಹಕ್ಕುಗಳ ಮೂಲಕ ಯಶ್ ಅವರಿಗೆ ₹100 ಕೋಟಿಗಿಂತಲೂ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಆದರೆ ಈ ಹಣಕಾಸಿನ ಒಪ್ಪಂದದ ಸಂಪೂರ್ಣ ವಿವರಗಳನ್ನು ಚಿತ್ರತಂಡ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಈಗ ಸಹಜವಾಗಿಯೇ, ಯಶ್ ಅವರ ಈ ಡೀಲ್ ಅನ್ನು ಅವರ ‘ಟಾಕ್ಸಿಕ್:ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್‌ ಹೋಲಿಸಿ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ ವರದಿಯಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ‘ರಾಮಾಯಣ’ ಚಿತ್ರದ ಡೀಲ್‌ನಲ್ಲಿ ಮಾಡಿರುವ ಬದಲಾವಣೆಗೆ ಸಿನಿಮಾದ ಕಲೆಕ್ಷನ್‌ ಕಾರಣವಲ್ಲ.

ಸಾಮಾನ್ಯವಾಗಿ ಸ್ಟಾರ್ ನಟರು ಸಿನಿಮಾಗಳಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಯಶ್ ಈ ಚಿತ್ರದಲ್ಲಿ ರಾವಣನಾಗಿ ಮಾತ್ರ ಪಾತ್ರ ಮಾಡುತ್ತಿಲ್ಲ ಬದಲಿಗೆ ತಮ್ಮ ಬುದ್ಧಿವಂತಿಕೆಯಿಂದ ಚಿತ್ರದ ಸಹ-ನಿರ್ಮಾಪಕರಾಗಿಯೂ ಕಾರ್ಯ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ದಕ್ಷಿಣ ಭಾರತದ ಥಿಯೇಟ್ರಿಕಲ್ ಡಿಸ್ಟ್ರಿಬ್ಯೂಷನ್ ಹಕ್ಕುಗಳನ್ನು ಪಡೆಯುವ ಮೂಲಕ ದೊಡ್ಡ ಬಿಸಿನೆಸ್‌ ನಿರ್ಧಾರ ಎನ್ನಬಹುದು. ಏನಾದರೆ ಚಿತ್ರಕ್ಕೆ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇರಳದಲ್ಲಿ ಅಭಿಮಾನಿಗಳಿಂದ ಭರ್ಜರಿ ಕ್ರೇಜ್‌ ಸೃಷ್ಟಿಯಾದರೆ, ಯಶ್ ಅವರ ಗಳಿಕೆ ಭಾರೀ ಪ್ರಮಾಣದಲ್ಲಿರಬಹುದು. ಮತ್ತೊಂದೆಡೆ, ಸಿನಿಮಾ ನಿರೀಕ್ಷೆಯಂತೆ ಪ್ರದರ್ಶನ ನೀಡದಿದ್ದರೆ, ಅದರ ಅಪಾಯವೂ ಯಶ್ ಅವರ ಪಾಲಿಗೆ ಬರಲಿದೆ.

ರಾಮಾಯಣ ಚಿತ್ರದ ಮೊದಲ ಭಾಗವು 2026 ನವೆಂಬರ್‌ 6 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಭಾರತದಲ್ಲಿ ನವೆಂಬರ್‌ 08 ರಂದು, ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಎರಡನೇಯ ಭಾಗವು 2027ರ ದೀಪಾವಳಿ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

‘ರಾಮಾಯಣ’ ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾಗಲಿದೆ ಎಂಬ ನಿರೀಕ್ಷೆಯಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಭರ್ಜರಿ ದೃಶ್ಯಗಳೊಂದಿಗೆ ಸಿನಿಮಾ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.

ಆದರೆ ‘ರಾಮಾಯಣ’ ಬಿಡುಗಡೆಯಾದ ಬಳಿಕವೇ ಯಶ್ ನ ಈ ಬಿಸಿನೆಸ್ ನಿರ್ಧಾರ ಎಷ್ಟು ಯಶಸ್ವಿಯಾಗಲಿದೆ ಎಂಬುದು ಸ್ಪಷ್ಟವಾಗಲಿದೆ. ಸದ್ಯ ಯಶ್ ಅವರ ಈ ಹೊಸ ನಡೆಯೇ ಅಭಿಮಾನಿಗಳು ಹಾಗೂ ಸಿನಿಪ್ರಿಯರ ಗಮನ ಸೆಳೆದಿದೆ.