SK Home Ad
Home ಸಿನಿ ಮಿಲ್ಸ್ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿಸುದ್ದಿ.. ಅಮೃತ ಮಹೋತ್ಸವದಲ್ಲಿ ಹಲವಾರು ವಿಶೇಷ; ಸಂಪೂರ್ಣ ಮಾಹಿತಿ ಇಲ್ಲಿದೆ

ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿಸುದ್ದಿ.. ಅಮೃತ ಮಹೋತ್ಸವದಲ್ಲಿ ಹಲವಾರು ವಿಶೇಷ; ಸಂಪೂರ್ಣ ಮಾಹಿತಿ ಇಲ್ಲಿದೆ

0
9

ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ, ಅಭಿಮಾನಿಗಳ ಪ್ರೀತಿಯ ‘ಯಜಮಾನ’ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು ವಿಷ್ಣು ಸೇನಾನಿಗಳು ಸಜ್ಜಾಗುತ್ತಿದ್ದಾರೆ.

ಸುಮಾರು ಒಂದು ಕೋಟಿಗೂ ಮಿಗಿಲಾದ ವೆಚ್ಚದಲ್ಲಿ, ಬರೋಬ್ಬರಿ 18 ಗಂಟೆಗಳ ಕಾಲ ನಡೆಯಲಿರುವ ಈ ಬೃಹತ್ ಮಹೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ನೂರಾರು ಜನರ ಶ್ರಮ, ಸಾವಿರಾರು ಅಭಿಮಾನಿಗಳ ಸಹಕಾರ ಹಾಗೂ ತಿಂಗಳುಗಳ ಪೂರ್ವತಯಾರಿಯೊಂದಿಗೆ ಈ ಮಹೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ರೂಪಿಸಲಾಗುತ್ತಿದೆ.

ಮಹೋತ್ಸವದ ಮೊದಲ ಪ್ರಮುಖ ಆಕರ್ಷಣೆಯಾಗಿ ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜದ ಮೆರವಣಿಗೆ ನಡೆಯಲಿದೆ.

ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್‌ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ. ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜವನ್ನು ಸಾವಿರಾರು ವಿಷ್ಣುವರ್ಧನ್ ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ. ಇದು ಅಮೃತ ಮಹೋತ್ಸವದ ಅತ್ಯಂತ ವಿಶೇಷ ಹಾಗೂ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಲಿದೆ.

ಮೆರವಣಿಗೆಯ ನಂತರ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಸಂಭ್ರಮ ರಾತ್ರಿ 12 ಗಂಟೆಯವರೆಗೂ ಮುಂದುವರಿಯಲಿದೆ.

“ಆ ದಿನ ವಿಷ್ಣು ಸೇನಾನಿಗಳು ಕೇವಲ ಒಂದು ಕಾರ್ಯಕ್ರಮವನ್ನು ಮಾಡುವುದಿಲ್ಲ. ಒಬ್ಬ ಮಹಾನ್ ಕಲಾವಿದನ ಮೇಲಿನ ಅಭಿಮಾನ ಹೇಗಿರುತ್ತದೆ ಎಂಬುದನ್ನು ಇಡೀ ನಾಡಿಗೆ ತೋರಿಸಲಿದ್ದಾರೆ. ಈ ಅಮೃತ ಮಹೋತ್ಸವ ಅಭಿಮಾನಿಗಳ ಪಾಲಿಗೆ ಒಂದು ಐತಿಹಾಸಿಕ ಕ್ಷಣವಾಗಬೇಕು ಎಂಬ ಕನಸಿನಿಂದ ಪ್ರತಿಯೊಂದು ಹೆಜ್ಜೆಯನ್ನೂ ರೂಪಿಸುತ್ತಿದ್ದೇವೆ” ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

ಕಾರ್ಯಕ್ರಮದ ವಿವರ

ದಿನಾಂಕ: ಸೆಪ್ಟೆಂಬರ್ 27
ಸಮಯ: ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ
ಮೆರವಣಿಗೆ: ಟೌನ್ ಹಾಲ್‌ನಿಂದ ನಾಯಂಡಹಳ್ಳಿವರೆಗೆ
ಮುಖ್ಯ ಕಾರ್ಯಕ್ರಮದ ಸ್ಥಳ: ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು