ಬೆಂಗಳೂರು: ಕನ್ನಡದ ರಿಯಾಲಿಟಿ ಶೋಗಳ ಮೂಲಕ ಜನರ ಮನಸ್ಸು ಗೆದ್ದು, ಬಿಗ್‌ಬಾಸ್ ವಿಜೇತರಾಗಿ ಹೊರಹೊಮ್ಮಿದ ಖ್ಯಾತ ಗಾಯಕ ಹನುಮಂತ ಸಿನಿಮಾಗಳಿಗೆ ಯಾಕೆ ಎಂಟ್ರಿ ಕೊಟ್ಟಿಲ್ಲ? ಆಫರ್‌ಗಳು ಬಂದಿಲ್ಲವೇ? ಅಥವಾ ಯಾಕೆ, ಏನು? ಅನ್ನೋವುದಕ್ಕೆ ಇದೀಗ ಹನುಮಂತ ಚಿತ್ರರಂಗದಿಂದ ದೂರ ಉಳಿದಿರುವುದರ ಹಿಂದಿನ ಅಸಲಿ ಕಾರಣವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಹೌದು.. ಬಿಗ್‌ಬಾಸ್ ಗೆದ್ದ ನಂತರ ಸಾಲು ಸಾಲು ಸಿನಿಮಾಗಳ ಅವಕಾಶಗಳು ಬಂದಿದ್ದರೂ, ತಮಗಿರುವ ಸ್ಪಷ್ಟ ನಿಲುವಿನಿಂದಾಗಿ ಆ ಆಫರ್‌ಗಳನ್ನು ನಿರಾಕರಿಸಿರುವುದಾಗಿ ಕಡ್ಡಿ ಮುರಿದಂತೆ ಹೇಳಿದ್ದಾರೆ. ಸದ್ಯ ಚಿತ್ರರಂಗದ ಪರಿಸ್ಥಿತಿಯ ಕುರಿತು ಮಾತನಾಡಿರುವ ಹನುಮಂತ, “ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳೇ ಥಿಯೇಟರ್‌ಗಳಲ್ಲಿ ಸರಿಯಾಗಿ ಓಡುತ್ತಿಲ್ಲ. ಇನ್ನು ನನಗೆ ನಟನೆಯೂ ಬರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ನಮ್ಮಂತಹವರ ಸಿನಿಮಾಗಳನ್ನು ನೋಡಲು ಯಾರು ಬರುತ್ತಾರೆ?” ಎಂದು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ, ತಮಗೆ ಬಂದ ಅವಕಾಶಗಳನ್ನು ನಿರಾಕರಿಸಿದ್ದರಿಂದ ಚಿತ್ರರಂಗದಲ್ಲಿ ಬೇರೆ ಯಾರಿಗಾದರೂ ಒಂದು ಒಳ್ಳೆಯ ಚಾನ್ಸ್ ಸಿಗುತ್ತದೆ ಎಂಬ ಉದಾರ ಮನೋಭಾವವನ್ನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಸಿನಿಮಾಗಳಿಂದ ದೂರವಿರುವ ಹನುಮಂತ ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಹಾಗೇ ಬಿಗ್ ಬಾಸ್ ಬಹುಮಾನದ ಮೊತ್ತದ ಬಗ್ಗೆಯೂ ಸ್ಪಷ್ಟನೆ ನೀಡಿದ್ದು, ಶೋನಲ್ಲಿ ಘೋಷಣೆಯಾದ ಸಂಪೂರ್ಣ ಹಣ ಕೈ ಸೇರಿಲ್ಲ. ನಿಯಮಾವಳಿಗಳ ಪ್ರಕಾರ ತೆರಿಗೆ (ಟ್ಯಾಕ್ಸ್) ಕಡಿತಗೊಂಡು, ಅಂತಿಮವಾಗಿ ಕೇವಲ 35 ಲಕ್ಷ ರೂಪಾಯಿ ಮಾತ್ರ ಕೈಗೆ ಬಂದಿದೆ ಎಂದು ತಿಳಿಸಿದ್ದಾರೆ.
ಈ ಬಂದ ಹಣದಲ್ಲೇ ಊರಿನಲ್ಲಿ ಮನೆ ನಿರ್ಮಿಸುತ್ತಿದ್ದು, “ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಹಿರಿಯರ ಗಾದೆ ಮಾತು ಎಷ್ಟು ನಿಜ ಎಂಬುದು ಈಗ ಸ್ವತಃ ಅನುಭವಕ್ಕೆ ಬರುತ್ತಿದೆ. ಸ್ವಂತ ಮನೆ ಕಟ್ಟುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ” ಎಂದು ಮನೆ ಕಟ್ಟುವಲ್ಲಿನ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.






















