ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಕಥಾಹಂದರದ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿರುವ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ‘ರಿಷಬ್ ಶೆಟ್ಟಿ ಫಿಲಂಸ್’ ಸಂಸ್ಥೆ ಆಯೋಜಿಸಿದ್ದ ಬೃಹತ್ ಆಡಿಷನ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಹೊಸ ಆಲೋಚನೆ ಹಾಗೂ ಹೊಸ ಪ್ರತಿಭೆಗಳಿಗೆ ಸದಾ ಆದ್ಯತೆ ನೀಡುವ ಈ ಸಂಸ್ಥೆಯ ಹೊಸ ಚಿತ್ರದ ಕಾಸ್ಟಿಂಗ್ ಕಾಲ್‌ಗೆ ರಾಜ್ಯದಾದ್ಯಂತ ಭಾರಿ ಪ್ರಮಾಣದ ಆಕಾಂಕ್ಷಿಗಳು ಹರಿದು ಬಂದಿದ್ದರು.
ಬೆಂಗಳೂರಿನ ಜಯನಗರದಲ್ಲಿರುವ ಪ್ರಸಿದ್ಧ ವಿಜಯ ಕಾಲೇಜು ಆವರಣದಲ್ಲಿ ಇತ್ತೀಚೆಗೆ ಈ ಕಾಸ್ಟಿಂಗ್ ಕಾಲ್ ನಡೆಯಿತು. 20 ರಿಂದ 65 ವರ್ಷದೊಳಗಿನ ಪುರುಷರು ಹಾಗೂ 20 ರಿಂದ 60 ವರ್ಷದೊಳಗಿನ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಈ ಆಡಿಷನ್‌ನಲ್ಲಿ ಕೇವಲ ಎರಡೇ ದಿನಗಳಲ್ಲಿ ಬರೋಬ್ಬರಿ 4,000ಕ್ಕೂ ಅಧಿಕ ನಟನಾ ಆಕಾಂಕ್ಷಿಗಳು ಪಾಲ್ಗೊಂಡಿದ್ದರು. ಒಂದೇ ಸಿನಿಮಾದ ಆಡಿಷನ್‌ಗಾಗಿ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.
ಆಗಮಿಸಿದ ಪ್ರತಿಯೊಬ್ಬ ಅಭ್ಯರ್ಥಿಗೂ ಸೂಕ್ತ ಅವಕಾಶ ಸಿಗುವಂತೆ ರಿಷಬ್ ಶೆಟ್ಟಿ ಫಿಲಂಸ್ ಹಾಗೂ ಕಾಲೇಜು ಆಡಳಿತ ಮಂಡಳಿಯು ಅತ್ಯಂತ ವ್ಯವಸ್ಥಿತವಾಗಿ ಆಡಿಷನ್ ಪ್ರಕ್ರಿಯೆಯನ್ನು ನಿರ್ವಹಿಸಿತು. ಸಂಸ್ಥೆಯ ಮೇಲಿಟ್ಟಿರುವ ಭರವಸೆ ಹಾಗೂ ಲಭಿಸಿದ ಅಭೂತಪೂರ್ವ ಸ್ಪಂದನೆಗೆ ರಿಷಬ್ ಶೆಟ್ಟಿ ಫಿಲಂಸ್ ತೀವ್ರ ಸಂತಸ ವ್ಯಕ್ತಪಡಿಸಿದ್ದು, ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದೆ.
ಒಟ್ಟಾರೆಯಾಗಿ.. ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ರಿಷಬ್ ಶೆಟ್ಟಿ ಈ ಪಾರದರ್ಶಕ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಆಡಿಷನ್ ಮೂಲಕ ಆಯ್ಕೆಯಾಗಲಿರುವ ನಟ-ನಟಿಯರೊಂದಿಗೆ ಮೂಡಿಬರಲಿರುವ ಹೊಸ ಸಿನಿಮಾ ಯಾವ ವಿಷಯವನ್ನು ಆಧರಿಸಿರಲಿದೆ ಎಂಬ ಕುತೂಹಲ ಈಗ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.






















