ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮನೆಯೊಳಗಿನ ಸಮೀಕರಣಗಳು ಸಂಪೂರ್ಣವಾಗಿ ಬದಲಾಗುತ್ತಿವೆ. ಇಷ್ಟು ದಿನಗಳ ಕಾಲ ದೊಡ್ಮನೆಯಲ್ಲಿ ಅತ್ಯಂತ ಆತ್ಮೀಯ ಸ್ನೇಹಿತರಂತೆ ಕಾಣಿಸಿಕೊಂಡಿದ್ದ ಆಸಿಯಾ ಫಿರ್ದೋಸ್ ಹಾಗೂ ಯಶಸ್ ಕೃಷ್ಣ ನಡುವೆ ಇದೀಗ ದೊಡ್ಡ ಮಟ್ಟದ ಕಿರಿಕ್ ಸ್ಫೋಟಗೊಂಡಿದ್ದು, ಇಬ್ಬರೂ ನೇರಾನೇರ ಜಗಳಕ್ಕೆ ಇಳಿದಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಈ ಹೈವೋಲ್ಟೇಜ್ ವಾಗ್ವಾದದ ಝಲಕ್ ಕಂಡುಬಂದಿದೆ. ಈ ವಾರ ಮನೆಯಲ್ಲಿ ಪರಿಚಯಿಸಲಾಗಿರುವ ‘ಬಿಗ್ ಬಾಸ್ ಪರಿಷತ್’ ಎಂಬ ವಿಶೇಷ ರಾಜಕೀಯ ಕಾನ್ಸೆಪ್ಟ್ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿಸಿದೆ. ಟಾಸ್ಕ್‌ನ ಕಾವಿನಲ್ಲಿ ಯಶಸ್ ವರ್ತನೆಯಿಂದ ತೀವ್ರ ಅಸಮಾಧಾನಗೊಂಡಿರುವ ಆಸಿಯಾ, “ನಿಮ್ಮದು ಸ್ವಾರ್ಥ ಬುದ್ಧಿ” ಎಂದು ನೇರವಾಗಿಯೇ ಆರೋಪಿಸಿದ್ದಾರೆ. ಇಷ್ಟು ದಿನಗಳ ಕಾಲ ಇದ್ದ ಸ್ನೇಹದ ಪರದೆ ಸರಿದು ಹೋಗಿದ್ದು, ಆಸಿಯಾ ತಮ್ಮ ಸ್ನೇಹಿತನ ವಿರುದ್ಧವೇ ತಿರುಗಿ ಬಿದ್ದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಇನ್ನು ಆಸಿಯಾ ಮತ್ತು ಯಶಸ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ, ಸಹಸ್ಪರ್ಧಿ ಸೌಂದರ್ಯಾ ಶೆಟ್ಟಿ ಚಪ್ಪಾಳೆ ತಟ್ಟಿ ಪ್ರತಿಕ್ರಿಯಿಸಿರುವುದು ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಆಪ್ತ ಸ್ನೇಹಿತರೇ ಬೇರ್ಪಡುತ್ತಿರುವ ಈ ಬೆಳವಣಿಗೆಯನ್ನು ಉಳಿದ ಸ್ಪರ್ಧಿಗಳು ತಮ್ಮ ಆಟಕ್ಕೆ ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.






















