ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ನಿವಾಸ’ದಲ್ಲಿ ನೀಲೂ ಪಾತ್ರದ ಮೂಲಕ ಮನೆಮಾತಾಗಿರುವ ನಟಿ ಮಾನಸ ಮನೋಹರ್ ಈಗ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಮೊದಲು ತಾವು ತಾಯಿಯಾಗುತ್ತಿರುವ ಬೇಬಿ ಬಂಪ್ ಫೋಟೋಗಳನ್ನ ಹಂಚಿಕೊಂಡಿದ್ದರು, ಹಾಗೇ ಸಿಮಂತ ಕಾರ್ಯವನ್ನು ಅದ್ದೂರಿಯಾಗಿ ಆಚರಿಸಿದ ವಿಡಿಯೋ ವೈರಲ್ ಆಗಿತ್ತು. ಈಗ ಗಂಡು ಮಗು ಜನಿಸಿರುವುದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಫೋಟೋ ಹಂಚಿಕೊಳ್ಳುವ ಮೂಲಕ ಈ ಸಂತಸದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಹಾಗೇ ತಮ್ಮ ಮುದ್ದಾದ ಕಂದನ ಮೊದಲ ಫೋಟೋ ಹಂಚಿಕೊಂಡಿರುವ ಮಾನಸ ಮನೋಹರ್, “ನಮ್ಮ ಅತ್ಯಂತ ಅಮೂಲ್ಯವಾದ ಮ್ಯಾನಿಫೆಸ್ಟೇಶನ್ ಇಲ್ಲಿದೆ. ನಮಗೆ ಗಂಡು ಮಗುವಾಗಿದೆ. ಈ ದಿನ ನಮ್ಮ ಪಾಲಿಗೆ ಅತ್ಯಂತ ಪ್ರೀತಿಯ ದಿನವಾಗಿದೆ. ನನ್ನ ತಂದೆಯೇ ಯಾವುದೋ ರೂಪದಲ್ಲಿ ಪುಟ್ಟ ಮಗುವಾಗಿ ನಮ್ಮ ಜೀವನಕ್ಕೆ ಮರಳಿದ್ದಾರೆ ಎಂದು ನನಗೆ ಭಾಸವಾಗುತ್ತಿದೆ,” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಅಷ್ಟೇ ಅಲ್ಲದೇ.. ನಟಿ ಮಾನಸ ಡೆಲಿವರಿ ರೂಮ್‌ನ ಕ್ಷಣಗಳು, ಪತಿ ಪ್ರೀತಮ್ ಚಂದ್ರ ಮಗುವನ್ನು ಎತ್ತಿಕೊಂಡಿರುವ ಫೋಟೋ ಹಾಗೂ ಮಗುವಿನ ಪುಟ್ಟ ಕೈಗಳ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದ್ರೆ ಸದ್ಯಕ್ಕೆ ಮಗುವಿನ ಮುಖವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಈ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವಜಾತ ಶಿಶುವಿಗೆ ಆಶೀರ್ವಾದದ ಮಳೆ ಸುರಿಸುತ್ತಿದ್ದಾರೆ.
ಒಟ್ಟಾರೆಯಾಗಿ.. ಮಾನಸ ಮನೋಹರ್ ದಂಪತಿಗಳಿಗೆ ಕಿರುತೆರೆ ಮತ್ತು ಹಿರಿತೆರೆಯ ಗಣ್ಯರು ಶುಭ ಹಾರೈಸುತ್ತಿದ್ದು, ನಟಿಯರಾದ ದಿಶಾ ಮದನ್, ಐಶ್ವರ್ಯ ಬಸ್ಪುರೆ, ರೆಬಾ ಜಾನ್ ಸೇರಿದಂತೆ ಹಲವರು ಕಾಮೆಂಟ್ ಮಾಡಿ ಪೋಷಕರಾಗಿ ಬಡ್ತಿ ಪಡೆದ ಜೋಡಿಗೆ ಅಭಿನಂದನೆ ಸಲ್ಲಿಸಿದ್ದಾರೆ.























