Home Advertisement
Home ಸಿನಿ ಮಿಲ್ಸ್ ‌ʻಬಾಕ್ಸ್ ಆಫೀಸ್‌ನಲ್ಲಿ ʻKDʼ ಅಬ್ಬರ: ಕಾಳಿ, ಮಚ್‌ ಲಕ್ಷ್ಮೀ ಎಷ್ಟು ಕೋಟಿ ಲೂಟಿ ಮಾಡಿದ್ರು ಗೊತ್ತಾ?

‌ʻಬಾಕ್ಸ್ ಆಫೀಸ್‌ನಲ್ಲಿ ʻKDʼ ಅಬ್ಬರ: ಕಾಳಿ, ಮಚ್‌ ಲಕ್ಷ್ಮೀ ಎಷ್ಟು ಕೋಟಿ ಲೂಟಿ ಮಾಡಿದ್ರು ಗೊತ್ತಾ?

0
36

ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘KD ದಿ ಡೆವಿಲ್’ ಚಿತ್ರ ಏಪ್ರಿಲ್ 30ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರವು ಮೊದಲ ದಿನವೇ ದೇಶಾದ್ಯಂತ ಬರೋಬ್ಬರಿ 23.7 ಕೋಟಿ ರೂಪಾಯಿ ಗಳಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದೆ.

ಕಾಳಿಯ ರೌದ್ರಾವತಾರ: ಚಿತ್ರದ ಕಥೆಯು ನಾಯಕ ಕಾಳಿದಾಸನ ಸುತ್ತ ಸಾಗುತ್ತದೆ. ಮನೆ ಮನೆಗೆ ಹಾಲು ಹಾಕುವುದು ಹಾಗೂ ಸೀಮೆ ಎಣ್ಣೆ ಅಂಗಡಿಯ ಉಸ್ತುವಾರಿ ನೋಡಿಕೊಳ್ಳುವ ಸಾಮಾನ್ಯ ವ್ಯಕ್ತಿಯಂತೆ ಕಾಳಿದಾಸ ಕಂಡರೂ, ತನ್ನವರ ತಂಟೆಗೆ ಬಂದವರ ಪಾಲಿಗೆ ಆತ ಮೃತ್ಯು ಸ್ವರೂಪಿ. ಅಣ್ಣ ಹಾಗೂ ಇಬ್ಬರು ಸಹೋದರಿಯರಿಗಾಗಿ ಪ್ರಾಣ ಕೊಡಲು ಸಿದ್ಧವಿರುವ ಕಾಳಿ, ಅಣ್ಣನ ಮೇಲೆ ಆಪತ್ತು ಬಂದಾಗ ‘ಕೆಡಿ’ಯಾಗಿ ರೌದ್ರಾವತಾರ ತಾಳುತ್ತಾನೆ. ನಿರ್ದೇಶಕ ಪ್ರೇಮ್ಸ್ 70-80ರ ದಶಕದ ರೆಟ್ರೋ ಹಿನ್ನೆಲೆಯಲ್ಲಿ ಈ ಭೂಗತ ಲೋಕದ ರೌಡಿಸಂ ಕಥೆಯನ್ನು ಹಸಿಹಸಿಯಾಗಿ ತೆರೆಯ ಮೇಲೆ ತಂದಿದ್ದಾರೆ.

ಪ್ರೇಮ್ಸ್ ಮಾರ್ಕ್ ಮೇಕಿಂಗ್ ಮತ್ತು ಸೆಂಟಿಮೆಂಟ್: ‘ಕರಿಯ’, ‘ಜೋಗಿ’ ಸಿನಿಮಾಗಳಂತೆ ಇಲ್ಲಿಯೂ ಭೂಗತ ಲೋಕದ ರಕ್ತಪಾತದ ನಡುವೆ ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಪ್ರೇಮಕಥೆಗೆ ಜಾಗ ನೀಡಲಾಗಿದೆ. ರಕ್ತಸಿಕ್ತ ದೃಶ್ಯಗಳು ಕ್ರೌರ್ಯದಂತೆ ಕಂಡರೂ, ಕಮರ್ಷಿಯಲ್ ಎಂಟರ್‌ಟೈನ್‌ಮೆಂಟ್ ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ. ತಾಂತ್ರಿಕವಾಗಿ ಸಿನಿಮಾ ಶ್ರೀಮಂತವಾಗಿದ್ದು, ಸೆಟ್ ವರ್ಕ್, ಕ್ಯಾಮೆರಾ ಕುಸುರಿ ಮತ್ತು ಸೌಂಡ್ ಡಿಸೈನ್ ಪ್ರತಿಯೊಂದು ದೃಶ್ಯಕ್ಕೂ ಜೀವ ತುಂಬಿವೆ.

ತಾರಾಗಣದ ಭರ್ಜರಿ ಪ್ರದರ್ಶನ: ನಾಯಕ ಧ್ರುವ ಸರ್ಜಾ ತಮ್ಮ ಮ್ಯಾನರಿಸಂ ಹಾಗೂ ಆಕ್ಷನ್ ಮೂಲಕ ಗಮನ ಸೆಳೆದ, ರೀಷ್ಮಾ ನಾಣಯ್ಯ ನಟನೆಯಲ್ಲಿ ಪೈಪೋಟಿ ನೀಡಿದ್ದಾರೆ. ಅಣ್ಣನ ಪಾತ್ರದಲ್ಲಿ ರಮೇಶ್ ಅರವಿಂದ್ ಇಷ್ಟವಾಗುತ್ತಾರೆ. ಉಳಿದಂತೆ ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹಾಗೂ ರವಿಶಂಕರ್ ಅಂತಹ ಘಟಾನುಘಟಿ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ʻಇದು ಅಂತ್ಯವಲ್ಲ, ಆರಂಭʼ: ‘KD’ ಚಿತ್ರವು ಇಲ್ಲಿಗೇ ಮುಗಿಯುವುದಿಲ್ಲ. ಕಥೆಯನ್ನು ಪೂರ್ಣಗೊಳಿಸದ ಪ್ರೇಮ್ಸ್, ಎರಡನೇ ಭಾಗಕ್ಕಾಗಿ ಮತ್ತಷ್ಟು ರೋಚಕ ತಿರುವುಗಳನ್ನು ಕಾಯ್ದಿರಿಸಿದ್ದಾರೆ. ‘ಕಾಳಿ’ ಅವತಾರದ ಅಸಲಿ ಆಟ ‘ಕೆಡಿ-2’ ನಲ್ಲಿ ಅನಾವರಣಗೊಳ್ಳಲಿದ್ದು, ಅಲ್ಲಿಯವರೆಗೆ ಪ್ರೇಕ್ಷಕರಲ್ಲಿ ಕುತೂಹಲ ಉಳಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಒಟ್ಟಾರೆಯಾಗಿ, ಸಾಹಸ ಮತ್ತು ಭಾವನೆಗಳ ಸಮ್ಮಿಲನದ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.