ಮಂಗಳೂರಿನ ಡಾನ್ ಕಥೆಗೆ ಹೊಸ ಕಾತರ: ‘ಹಲ್ಕಾ ಡಾನ್’ ಫಸ್ಟ್ ಕಟ್ ದಿನಾಂಕ ಪ್ರಕಟ
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆ ಹಾಗೂ ಮಂಗಳೂರಿನ ಹಿನ್ನೆಲೆಯ ಕಥೆಯ ಮೂಲಕ ಗಮನ ಸೆಳೆಯುತ್ತಿರುವ ಪ್ರಮೋದ್ ಪಂಜು ಅಭಿನಯದ ‘ಹಲ್ಕಾ ಡಾನ್’ ಚಿತ್ರದ ಹೊಸ ಅಪ್‌ಡೇಟ್‌ಗೆ ದಿನಾಂಕ ನಿಗದಿಯಾಗಿದೆ. ಚಿತ್ರದ ಫಸ್ಟ್ ಕಟ್ ಕುರಿತು ನವೆಂಬರ್ 12ರಂದು ಬೆಳಗ್ಗೆ 11:30ಕ್ಕೆ ಹೊಸ ಮಾಹಿತಿ ಹಂಚಿಕೊಳ್ಳುವುದಾಗಿ ನಟ ಪ್ರಮೋದ್ ಪಂಜು ತಿಳಿಸಿದ್ದಾರೆ.
ಗಮನ ಸೆಳೆದ ‘ಹಲ್ಕಾ ಡಾನ್’ ಚಿತ್ರದ ಅಪ್‌ಡೇಟ್ : ‘ಹಲ್ಕಾ ಡಾನ್’ ಚಿತ್ರದ ನವೆಂಬರ್ 12ರ ಅಪ್‌ಡೇಟ್ ಇದೀಗ ಸಿನಿಪ್ರಿಯರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ‘ಫಸ್ಟ್ ಕಟ್’ ಕುರಿತು ಹೊಸ ಮಾಹಿತಿ ಹೊರಬೀಳಲಿದೆ. ಎಂಬ ವಿಷಯವೇ ಎಂಟರ್‌ಟೈನ್‌ಮೆಂಟ್ ಟ್ರೆಂಡಿಂಗ್ ವಿಭಾಗದಲ್ಲಿಯೂ ಸ್ದದುಮಾಡುತ್ತಿದೆ.

ಮಂಗಳೂರು ಭೂಗತ ಲೋಕದ ಸುತ್ತ ಕಥೆ : ‘ಹಲ್ಕಾ ಡಾನ್’ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಆಕ್ಷನ್ ಕಾಮಿಡಿ ಚಿತ್ರ. ಮಂಗಳೂರಿನ ಪರಿಸರ ಹಾಗೂ ಅಲ್ಲಿನ ಸ್ಥಳೀಯ ಹಿನ್ನೆಲೆಯನ್ನು ಆಧರಿಸಿ ಕಥೆ ರೂಪಿಸಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಅನಿರೀಕ್ಷಿತವಾಗಿ ಪ್ರಭಾವಿ ಗ್ಯಾಂಗ್‌ನ ಮುಖವಾಗಿ ಗುರುತಿಸಿಕೊಂಡು, ಸ್ಥಳೀಯ ಭೂಗತ ಲೋಕದ ಪೈಪೋಟಿಯಲ್ಲಿ ಸಿಲುಕುವ ಸನ್ನಿವೇಶಗಳನ್ನು ಹಾಸ್ಯ ಮತ್ತು ಸಾಹಸದ ಮೂಲಕ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದು ನಿರ್ದೇಶಕ ವೆಂಕಟಾಚಲ (ಚಲಂ) ಈ ಹಿಂದೆ ತಿಳಿಸಿದ್ದಾರೆ.
ಪ್ರಮೋದ್ ಪಂಜುಗೆ ಅಮೃತಾ ಅಯ್ಯಂಗಾರ್ ಜೋಡಿ : ಚಿತ್ರದಲ್ಲಿ ಪ್ರಮೋದ್ ಪಂಜು ನಾಯಕನಾಗಿ ಹಾಗೂ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ, ಅರವಿಂದ್ ಬೋಳಾರ್, ಸಾಯಿ ಕುಮಾರ್, ಜ್ಯೋತಿ ಪೂರ್ವಜ್ ಮತ್ತು ರಮೇಶ್ ಇಂದಿರಾ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಟಗರು’, ‘ಸಲಗ’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿರುವ ಕೆ.ಪಿ. ಶ್ರೀಕಾಂತ್ ಅವರು ವೀನಸ್ ಎಂಟರ್‌ಟೈನರ್ಸ್ ಬ್ಯಾನರ್‌ನಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶನದ ಹೊಣೆ ವೆಂಕಟಾಚಲ (ಚಲಂ) ಅವರದ್ದು. ಸತ್ಯ ಹೆಗ್ಡೆ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಹಾಗೂ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಕನ್ನಡ, ತೆಲುಗು ಮಾತ್ರವಲ್ಲ – ತುಳುವಿನಲ್ಲೂ ಬಿಡುಗಡೆ : ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರೀಕರಣ ನಡೆಸಿರುವುದರಿಂದ ಸ್ಥಳೀಯ ತುಳು ಪ್ರೇಕ್ಷಕರನ್ನೂ ತಲುಪುವ ಉದ್ದೇಶದಿಂದ ಚಿತ್ರವನ್ನು ತುಳು ಭಾಷೆಯಲ್ಲಿಯೂ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಈ ಮೂಲಕ ಕನ್ನಡ, ತೆಲುಗು ಮತ್ತು ತುಳು ಭಾಷೆಗಳಲ್ಲಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಯೋಜನೆ ರೂಪಿಸಲಾಗಿದೆ.
ನವೆಂಬರ್ 12ರಂದು ಬೆಳಗ್ಗೆ 11:30ಕ್ಕೆ ಹೊರಬೀಳಲಿರುವ ಮಾಹಿತಿ ಚಿತ್ರದ ಟೀಸರ್ ಅಥವಾ ಫಸ್ಟ್ ಕಟ್‌ಗೆ ಸಂಬಂಧಿಸಿದ ಅಪ್‌ಡೇಟ್ ಆಗಿರಬಹುದೇ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಆದರೆ ನಿಖರವಾಗಿ ಯಾವ ರೀತಿಯ ವಿಡಿಯೊ ಅಥವಾ ಮಾಹಿತಿ ಬಿಡುಗಡೆಯಾಗಲಿದೆ ಎಂಬುದನ್ನು ಚಿತ್ರತಂಡದ ಅಧಿಕೃತ ಪ್ರಕಟಣೆಯೇ ಸ್ಪಷ್ಟಪಡಿಸಬೇಕಿದೆ.






















