ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟ, ‘ನಟ ರಾಕ್ಷಸ’ ಎಂದೇ ಖ್ಯಾತಿ ಪಡೆದಿರುವ ಡಾಲಿ ಧನಂಜಯ್ ಬದುಕಿನಲ್ಲಿ ಈಗ ಸಂಭ್ರಮದ ಕಾಲ. ಇತ್ತೀಚೆಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದ ಧನಂಜಯ್ ಹಾಗೂ ಧನ್ಯಾ ದಂಪತಿಯ ಮನೆಗೆ ಈಗ ಪುಟ್ಟ ಅತಿಥಿಯ ಆಗಮನವಾಗಿದೆ. ದಂಪತಿಗೆ ಗಂಡು ಮಗು ಜನಿಸಿದ್ದು, ಈ ಸಂತಸದ ಸುದ್ದಿಯನ್ನು ಸ್ವತಃ ಧನಂಜಯ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆಯಷ್ಟೇ ಧನಂಜಯ್ ತಮ್ಮ ಪತ್ನಿ ಧನ್ಯತಾ ಸೀಮಂತ ಶಾಸ್ತ್ರದ ಸುಂದರವಾದ ‘ಬೇಬಿ ಬಂಪ್’ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ‘ಜೂನಿಯರ್ ಡಾಲಿ’ ಬಂದಿರುವ ವಿಷಯ ತಿಳಿದು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯಾಗಿರುವ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿರುವ ನಟ, ನಮ್ಮ ಹಾಗೂ ಮಗುವಿನ ಮೇಲೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಸದಾ ಇರಲಿ ಎಂದು ಕೋರಿದ್ದಾರೆ.
ಧನಂಜಯ್ ಚಿತ್ರರಂಗದಲ್ಲಿ ಕಠಿಣ ಪರಿಶ್ರಮದ ಮೂಲಕ ಬೆಳೆದು ಬಂದವರು. ‘ಟಗರು’ ಚಿತ್ರದ ಡಾಲಿ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದು, ನಂತರ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ತಮ್ಮನ್ನು ಈ ಸಿನಿ ಭೂಮಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ವೈಯಕ್ತಿಕ ಜೀವನದ ಈ ಹೊಸ ಅಧ್ಯಾಯ, ಅಂದರೆ ತಂದೆಯಾಗಿ ಬಡ್ತಿ ಪಡೆದಿರುವುದು ಡಾಲಿ ಬದುಕಿನ ಅತ್ಯಂತ ಶ್ರೇಷ್ಠ ಕ್ಷಣಗಳಲ್ಲಿ ಒಂದಾಗಿದೆ.
ಈ ಸುದ್ದಿ ಹೊರಬೀಳುತ್ತಿದ್ದಂತೆ ಸ್ಯಾಂಡಲ್‌ವುಡ್‌ನ ಗಣ್ಯರು, ಸಹ ಕಲಾವಿದರು ಹಾಗೂ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. “ನಮ್ಮ ನೆಚ್ಚಿನ ನಟನ ಮನೆಗೆ ಪುಟ್ಟ ರಾಜಕುಮಾರ ಬಂದಿದ್ದಾನೆ” ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ, ಧನಂಜಯ್ ಮನೆಯಲ್ಲಿ ಈಗ ಹಬ್ಬದ ವಾತಾವರಣ ಮನೆಮಾಡಿದ್ದು, ಜೂನಿಯರ್ ಡಾಲಿಯನ್ನು ನೋಡಲು ಎಲ್ಲರೂ ಕಾತರರಾಗಿದ್ದಾರೆ.























