SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಧಮಾಕಾ: 4 ಸೂಪರ್‌ಸ್ಟಾರ್‌ಗಳ ಸಂಗಮಕ್ಕೆ ಫ್ಯಾನ್ಸ್ ಫಿದಾ

ಬಿಗ್ ಬಾಸ್ ಧಮಾಕಾ: 4 ಸೂಪರ್‌ಸ್ಟಾರ್‌ಗಳ ಸಂಗಮಕ್ಕೆ ಫ್ಯಾನ್ಸ್ ಫಿದಾ

0
102
ಒಂದೇ ದಿನ ನಾಲ್ಕು ಬಿಗ್ ಬಾಸ್ ಶೋಗಳ ಪ್ರೀಮಿಯರ್; ಸೂಪರ್‌ಸ್ಟಾರ್‌ಗಳ ಸಂಗಮಕ್ಕೆ ಫ್ಯಾನ್ಸ್ ಫಿದಾ

ಬೆಂಗಳೂರು: ಕಿರುತೆರೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿರುವ ‘ಬಿಗ್ ಬಾಸ್’ ಹೊಸ ಸೀಸನ್‌ಗಳ ಕೌಂಟ್‌ಡೌನ್ ಆರಂಭವಾಗಿದೆ. ಈ ಬಾರಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಆವೃತ್ತಿಗಳು ಒಂದೇ ದಿನ, ಅಂದರೆ ಸೆಪ್ಟೆಂಬರ್ 6ರಂದು ಪ್ರೇಕ್ಷಕರ ಮುಂದೆ ಬರಲಿವೆ. ಇದರ ನಡುವೆ ನಾಲ್ಕು ಭಾಷೆಗಳ ಬಿಗ್ ಬಾಸ್ ಶೋಗಳ ನಿರೂಪಕರಾದ ವಿಜಯ್ ಸೇತುಪತಿ, ನಾಗಾರ್ಜುನ, ಕಿಚ್ಚ ಸುದೀಪ್ ಹಾಗೂ ಮೋಹನ್‌ಲಾಲ್ ಒಟ್ಟಿಗೆ ಕಾಣಿಸಿಕೊಂಡಿರುವ ವಿಶೇಷ ಪ್ರೋಮೋ ಅಭಿಮಾನಿಗಳ ಗಮನ ಸೆಳೆದಿದೆ.

‘ನಾಲ್ವರು ಸೂಪರ್‌ಸ್ಟಾರ್‌ಗಳು, ನಾಲ್ಕು ಮನೆಗಳು, ಒಂದು ಅದ್ಭುತ ಕ್ಷಣ’ ಎಂಬ ಪರಿಕಲ್ಪನೆಯೊಂದಿಗೆ ಹೊರಬಂದಿರುವ ಈ ಪ್ರೋಮೋ, ನಾಲ್ಕು ಭಾಷೆಗಳ ಬಿಗ್ ಬಾಸ್ ಆವೃತ್ತಿಗಳ ನಡುವಿನ ವಿಶೇಷ ಸಂಪರ್ಕವನ್ನು ತೋರಿಸಿದೆ. JioHotstar ಹಂಚಿಕೊಂಡಿರುವ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಗ್ ಬಾಸ್ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.

ಕನ್ನಡದಲ್ಲಿ ಕಿಚ್ಚ ಸುದೀಪ್ : ‘ಬಿಗ್ ಬಾಸ್ ಕನ್ನಡ’ದ 13ನೇ ಸೀಸನ್‌ಗೂ ಕಿಚ್ಚ ಸುದೀಪ್ ನಿರೂಪಕರಾಗಿದ್ದಾರೆ. ಸತತ ಒಂಬತ್ತನೇ ವರ್ಷ ಅವರು ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ವಹಿಸುತ್ತಿರುವುದು ವಿಶೇಷ. ಹೊಸ ಸ್ಪರ್ಧಿಗಳು, ಹೊಸ ಟಾಸ್ಕ್‌ಗಳು ಹಾಗೂ ವಿಭಿನ್ನ ಸವಾಲುಗಳೊಂದಿಗೆ ಈ ಬಾರಿ ಕಾರ್ಯಕ್ರಮ ಮತ್ತಷ್ಟು ಕುತೂಹಲ ಮೂಡಿಸುವ ನಿರೀಕ್ಷೆಯಿದೆ.

ತಮಿಳಿನಲ್ಲಿ ವಿಜಯ್ ಸೇತುಪತಿ: ‘ಬಿಗ್ ಬಾಸ್ ತಮಿಳು’ 10ನೇ ಸೀಸನ್‌ಗೆ ನಟ ವಿಜಯ್ ಸೇತುಪತಿ ಮತ್ತೊಮ್ಮೆ ನಿರೂಪಕರಾಗಿ ಮರಳುತ್ತಿದ್ದಾರೆ. ಇದು ಕಾರ್ಯಕ್ರಮದ ಮೈಲಿಗಲ್ಲಿನ 10ನೇ ಸೀಸನ್ ಆಗಿದ್ದು, ಸೆಪ್ಟೆಂಬರ್ 6ರಂದು ಗ್ರ್ಯಾಂಡ್ ಲಾಂಚ್ ನಡೆಯಲಿದೆ. JioHotstar ಹಾಗೂ Star Vijayನಲ್ಲಿ ಪ್ರಸಾರವಾಗಲಿದ್ದು, 24×7 ಲೈವ್ ಸ್ಟ್ರೀಮಿಂಗ್‌ಗೂ ಅವಕಾಶ ಇರಲಿದೆ.

ತೆಲುಗಿನಲ್ಲಿ ನಾಗಾರ್ಜುನ : ತೆಲುಗು ಬಿಗ್ ಬಾಸ್‌ನ ಜನಪ್ರಿಯ ನಿರೂಪಕ ಅಕ್ಕಿನೇನಿ ನಾಗಾರ್ಜುನ ಹೊಸ ಸೀಸನ್‌ಗೂ ಹೋಸ್ಟ್ ಆಗಿ ಮುಂದುವರಿಯಲಿದ್ದಾರೆ. ಈ ಸೀಸನ್‌ಗೆ ‘ದಶಾವತಾರಂ’ ಎಂಬ ಥೀಮ್‌ನ ಸುಳಿವು ಈಗಾಗಲೇ ದೊರೆತಿದ್ದು, ನಾಗಾರ್ಜುನ ಅಭಿಮಾನಿಗಳಲ್ಲೂ ಕಾರ್ಯಕ್ರಮದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಮಲಯಾಳಂನಲ್ಲಿ ಮೋಹನ್‌ಲಾಲ್: ಮಲಯಾಳಂ ಬಿಗ್ ಬಾಸ್‌ನ ಹೊಸ ಸೀಸನ್‌ನಲ್ಲಿ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತೊಮ್ಮೆ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಬಿಗ್ ಬಾಸ್ ಮಲಯಾಳಂ’ 8ನೇ ಸೀಸನ್ ಸೆಪ್ಟೆಂಬರ್ 6ರಂದು JioHotstar ಮತ್ತು Asianetನಲ್ಲಿ ಆರಂಭವಾಗಲಿದೆ. ಈ ಬಾರಿಯ ಥೀಮ್ ಕೂಡ ಕಾರ್ಯಕ್ರಮದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಒಂದೇ ದಿನ ನಾಲ್ಕು ಭಾಷೆಗಳ ಬಿಗ್ ಬಾಸ್ : ಸಾಮಾನ್ಯವಾಗಿ ವಿಭಿನ್ನ ಸಮಯದಲ್ಲಿ ಆರಂಭವಾಗುತ್ತಿದ್ದ ಪ್ರಾದೇಶಿಕ ಬಿಗ್ ಬಾಸ್ ಆವೃತ್ತಿಗಳನ್ನು ಈ ಬಾರಿ ಒಂದೇ ದಿನ ಪ್ರೇಕ್ಷಕರ ಮುಂದೆ ತರುವ ಮೂಲಕ JioHotstar ದೊಡ್ಡ ಮಟ್ಟದ ಮನರಂಜನಾ ಸಂಭ್ರಮಕ್ಕೆ ವೇದಿಕೆ ಸಿದ್ಧಪಡಿಸಿದೆ. ನಾಲ್ಕು ಭಾಷೆಗಳ ಶೋಗಳ ಪ್ರೀಮಿಯರ್ ಒಂದೇ ದಿನ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ವಿಶೇಷ ಕುತೂಹಲ ಮೂಡಿಸಿದೆ.

ವಿಜಯ್ ಸೇತುಪತಿ, ನಾಗಾರ್ಜುನ, ಕಿಚ್ಚ ಸುದೀಪ್ ಮತ್ತು ಮೋಹನ್‌ಲಾಲ್ ಅವರಂತಹ ದಕ್ಷಿಣ ಭಾರತದ ನಾಲ್ವರು ಜನಪ್ರಿಯ ತಾರೆಯರು ಒಂದೇ ಪ್ರೋಮೋದಲ್ಲಿ ಕಾಣಿಸಿಕೊಂಡಿರುವುದು ಈ ವಿಶೇಷ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ.

ಸೆಪ್ಟೆಂಬರ್ 6ರಂದು ನಾಲ್ಕು ಬಿಗ್ ಬಾಸ್ ಮನೆಗಳ ಬಾಗಿಲು ತೆರೆಯಲಿದ್ದು, ಹೊಸ ಸ್ಪರ್ಧಿಗಳು, ಹೊಸ ಆಟಗಳು, ಟಾಸ್ಕ್‌ಗಳು, ತಂತ್ರಗಳು, ಸ್ನೇಹ, ಸಂಘರ್ಷ ಹಾಗೂ ಮನರಂಜನೆಯೊಂದಿಗೆ ಹೊಸ ಸೀಸನ್‌ಗಳು ಆರಂಭವಾಗಲಿವೆ. ಹೀಗಾಗಿ ಬಿಗ್ ಬಾಸ್ ಪ್ರಿಯರ ಪಾಲಿಗೆ ಸೆಪ್ಟೆಂಬರ್ 6 ವಿಶೇಷ ದಿನವಾಗಲಿದೆ.


ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.