Home Advertisement
Home ಸುದ್ದಿ ದೇಶ NEET-UG ಪರೀಕ್ಷೆ ರದ್ದತಿ ಹಿನ್ನೆಲೆ: ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ, ಮುಂದುವರಿದ ಕರಾಳ ಸರಣಿ

NEET-UG ಪರೀಕ್ಷೆ ರದ್ದತಿ ಹಿನ್ನೆಲೆ: ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ, ಮುಂದುವರಿದ ಕರಾಳ ಸರಣಿ

0
50

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ‘NEET-UG 2026’ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಗೊಳಿಸಿದ ಬೆನ್ನಲ್ಲೇ, ದೇಶದ ವಿವಿಧೆಡೆ ವೈದ್ಯಕೀಯ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ಸಂಚಲನ ಮುಡಿಸಿವೆ. ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಗೋವಾದಲ್ಲಿ ಆತಂಕ ಹಾಗೂ ಶೈಕ್ಷಣಿಕ ಒತ್ತಡ ತಾಳಲಾರದೆ ವಿದ್ಯಾರ್ಥಿಗಳು ತೀವ್ರ ನಿರ್ಧಾರ ಕೈಗೊಂಡಿದ್ದಾರೆ.

ರಾಜಸ್ಥಾನದ ಸಿಕಾರ್‌ನಲ್ಲಿ ಕಳೆದ ಮೂರು ವರ್ಷಗಳಿಂದ NEET ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಜುಂಜುನು ಜಿಲ್ಲೆಯ ಪ್ರದೀಪ್ ಮೇಘವಾಲ್ (21) ಎಂಬ ವಿದ್ಯಾರ್ಥಿ ತನ್ನ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇ 3 ರಂದು ನಡೆದಿದ್ದ ಪರೀಕ್ಷೆಯಲ್ಲಿ ಪ್ರದೀಪ್ 720 ಕ್ಕೆ 650 ಅಂಕಗಳನ್ನು ನಿರೀಕ್ಷಿಸಿದ್ದನು. ಈ ಬಾರಿ ಸರ್ಕಾರಿ ವೈದ್ಯಕೀಯ ಸೀಟು ಸಿಗುವ ಸಂಪೂರ್ಣ ಭರವಸೆಯಲ್ಲಿದ್ದ ಆತ, ಪರೀಕ್ಷೆ ರದ್ದಾದ ನಂತರ ತೀವ್ರ ಖಿನ್ನತೆಗೆ ಒಳಗಾಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ದೇಶಾದ್ಯಂತ ಮುಂದುವರಿದ ಕರಾಳ ಸರಣಿ: ಇದೇ ರೀತಿಯ ಘಟನೆಗಳು ದೇಶದ ಇತರೆಡೆಗಳಲ್ಲೂ ನಡೆದಿವೆ. ದೆಹಲಿಯ ಆಜಾದ್‌ಪುರದಲ್ಲಿ 20 ವರ್ಷದ ಯುವತಿ ಹಾಗೂ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮೂರನೇ ಪ್ರಯತ್ನದಲ್ಲಿದ್ದ ರಿತಿಕ್ ಮಿಶ್ರಾ (21) ಎಂಬ ವಿದ್ಯಾರ್ಥಿ ಪರೀಕ್ಷಾ ವಿವಾದದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ದಕ್ಷಿಣ ಗೋವಾದಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬ ಶೈಕ್ಷಣಿಕ ಒತ್ತಡ ಹಾಗೂ ಕ್ರೀಡೆಯೊಂದಿಗೆ ಅಧ್ಯಯನವನ್ನು ಸಮತೋಲನಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಡೆತ್‌ನೋಟ್ ಬರೆದಿಟ್ಟು ಜೀವನ ಕೊನೆಗೊಳಿಸಿದ್ದಾನೆ.

ವಿದ್ಯಾರ್ಥಿಗಳ ಸಾವಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿಯು ಅಭ್ಯರ್ಥಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ ಎಂದು ವಿಷಾದಿಸಿದ್ದಾರೆ. ಈ ಮಧ್ಯೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜೂನ್ 21 ರಂದು ಮರು ಪರೀಕ್ಷೆ ನಡೆಸಲಾಗುವುದು ಮತ್ತು ಮುಂದಿನ ವರ್ಷದಿಂದ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿರಲಿದೆ ಎಂದು ಘೋಷಿಸಿದ್ದಾರೆ. ಆದಾಗ್ಯೂ, ಸದ್ಯದ ಅನಿಶ್ಚಿತತೆಯು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ಆತಂಕಕ್ಕೆ ತಳ್ಳಿದೆ.