ಶಿವಮೊಗ್ಗ: ವಿಮಾನ ಟಿಕೆಟ್ ಬುಕ್ ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ಆರೋಪಿಗಳು ಆರಂಭದಲ್ಲಿ ದೂರುದಾರರನ್ನು ಸಂಪರ್ಕಿಸಿ ತಮ್ಮ ಕಂಪನಿಯ ಮೂಲಕ ಸುಲಭವಾಗಿ ವಿಮಾನ ಟಿಕೆಟ್ ಕಾಯ್ದಿರಿಸಬಹುದು ಎಂದು ನಂಬಿಸಿದ್ದರು. ನಂತರ ದೂರುದಾರರ ವೈಯಕ್ತಿಕ ಮಾಹಿತಿ ಪಡೆದು, ನೋಂದಣಿ ಶುಲ್ಕದ ಹೆಸರಿನಲ್ಲಿ 59,000 ರೂ.ಗಳನ್ನು ಮೊದಲಿಗೆ ವರ್ಗಾಯಿಸಿಕೊಂಡಿದ್ದರು.
ಬಳಿಕ ವಿವಿಧ ಹಂತಗಳಲ್ಲಿ ಹಣ ಪಡೆಯಲಾಗಿದೆ. ದೂರುದಾರರು, ಅವರ ಪತ್ನಿ ಹಾಗೂ ಮಗನ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 11,09,000 ರೂಪಾಯಿಗಳನ್ನು ಆರೋಪಿಗಳು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
ಹಣ ಪಡೆದ ನಂತರ ಯಾವುದೇ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿಕೊಡದೆ ವಂಚಿಸಿದ್ದಾರೆ. ತಮ್ಮ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ಆರೋಪಿಗಳು ಹೆಚ್ಚುವರಿಯಾಗಿ 4,00,000 ರೂಪಾಯಿ ನೀಡಿದರೆ ಮಾತ್ರ ಪ್ರಕ್ರಿಯೆ ಮುಗಿಯುತ್ತದೆ ಎಂದು ಹೇಳಿ ಮತ್ತಷ್ಟು ವಂಚಿಸಲು ಯತ್ನಿಸಿದ್ದಾರೆ. ಈ ಕುರಿತಂತೆ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.






















