Home Advertisement
Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ: 35 ಕೋಟಿ ವೆಚ್ಚದ ನೂತನ ಮೃಗಾಲಯ ಲೋಕಾರ್ಪಣೆ

ಕಲಬುರಗಿ: 35 ಕೋಟಿ ವೆಚ್ಚದ ನೂತನ ಮೃಗಾಲಯ ಲೋಕಾರ್ಪಣೆ

0
81

ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ಪ್ರವಾಸಿ ತಾಣ; ಕಲಬುರಗಿ ಮೃಗಾಲಯ ಉದ್ಘಾಟನೆ

ಸಂ.ಕ.‌ ಸಮಾಚಾರ ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಸರ ಸಂರಕ್ಷಣೆ, ವನ್ಯಜೀವಿ ಜಾಗೃತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಮೃಗಾಲಯವನ್ನು ಸೋಮವಾರ ಉದ್ಘಾಟಿಸಲಾಯಿತು.

ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಮೃಗಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಸುಮಾರು 43 ಎಕರೆ ಪ್ರದೇಶದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಮೃಗಾಲಯ ಪರಿಸರ ಸಮತೋಲನ ಕಾಪಾಡುವ ಜೊತೆಗೆ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹಾಗೂ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ ಎಂದು ಸಚಿವ ಖಂಡ್ರೆ ಹೇಳಿದರು.

“ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಕೊಡುಗೆ” : “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸ್ಥಗಿತಗೊಂಡಿದ್ದ ಈ ಯೋಜನೆಗೆ ಸಚಿವ ಪ್ರಿಯಾಂಕ್ ಖರ್ಗೆ ವಿಶೇಷ ಆಸಕ್ತಿ ವಹಿಸಿ ಚುರುಕು ನೀಡಿದ ಪರಿಣಾಮ ಇಂದು ಮೃಗಾಲಯ ಲೋಕಾರ್ಪಣೆಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಂಪಿಯ ನಂತರದ ಪ್ರಮುಖ ಮೃಗಾಲಯವಾಗಿ ಇದು ರೂಪುಗೊಳ್ಳಲಿದೆ” ಎಂದು ಖಂಡ್ರೆ ಹೇಳಿದರು. ಮೃಗಾಲಯ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಿಂದ 29 ಕೋಟಿ ರೂ., ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ 6 ಕೋಟಿ ರೂ. ಹಾಗೂ ಇನ್ಫೋಸಿಸ್ ಸಂಸ್ಥೆಯಿಂದ 3.20 ಕೋಟಿ ರೂ. ನೆರವು ದೊರೆತಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದ 9ನೇ ಮೃಗಾಲಯ : ಕಲಬುರಗಿ ಮೃಗಾಲಯವು ಕರ್ನಾಟಕದ 9ನೇ ಮೃಗಾಲಯವಾಗಿದ್ದು, ದೇಶದಲ್ಲೇ ಮೃಗಾಲಯಗಳ ಸಂಖ್ಯೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಸಚಿವರು ತಿಳಿಸಿದರು. 2022ರ ಪ್ರಾಣಿ ಜನಗಣತಿಯ ಪ್ರಕಾರ ರಾಜ್ಯದಲ್ಲಿ 6,395 ಆನೆಗಳು ಹಾಗೂ 563 ಹುಲಿಗಳಿವೆ ಎಂದು ವಿವರಿಸಿದರು.

56 ಪ್ರಭೇದದ ಪ್ರಾಣಿ-ಪಕ್ಷಿಗಳ ವೀಕ್ಷಣೆ : ನೂತನ ಮೃಗಾಲಯದಲ್ಲಿ ಒಟ್ಟು 56 ವಿವಿಧ ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಬನ್ನೇರುಘಟ್ಟದಿಂದ ಎರಡು ಸಿಂಹಗಳನ್ನು ತರಲಾಗಿದ್ದು, ಮೊಸಳೆ, ನರಿ ಸೇರಿದಂತೆ ಹಲವು ವನ್ಯಜೀವಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಪರೂಪದ ಪ್ರಾಣಿ-ಪಕ್ಷಿಗಳನ್ನು ತರಲು ಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.

ಚಿಂಚೋಳಿ ವನ್ಯಜೀವಿ ಧಾಮಕ್ಕೆ ವಿಶೇಷ ಒತ್ತು : ಚಿಂಚೋಳಿ ವನ್ಯಜೀವಿ ಧಾಮದ ಅಭಿವೃದ್ಧಿಗೂ ಸರ್ಕಾರ ವಿಶೇಷ ಗಮನ ಹರಿಸುತ್ತಿದ್ದು, ಅಲ್ಲಿ ಈಗಾಗಲೇ ಬೋಟಿಂಗ್ ಹಾಗೂ ಸಫಾರಿಗೆ ಚಾಲನೆ ನೀಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗಿದೆ ಎಂದು ಖಂಡ್ರೆ ತಿಳಿಸಿದರು.

ಹಸಿರು ಹೊದಿಕೆ ಹೆಚ್ಚಿಸಲು ಸರ್ಕಾರದ ಕ್ರಮ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಪ್ರದೇಶ ಮತ್ತು ಹಸಿರು ಹೊದಿಕೆ ಕಡಿಮೆಯಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವರು, ಕಲಬುರಗಿ, ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಇರುವುದರಿಂದ ಹವಾಮಾನ ವೈಪರಿತ್ಯಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು. ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಕೆಆರ್‌ಡಿಬಿ ಸಭೆಯಲ್ಲಿ ವಿಶೇಷ ಚರ್ಚೆ ನಡೆಸಿ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೂರು ವರ್ಷದಲ್ಲಿ 11 ಲಕ್ಷ ಸಸಿ ನೆಡುವ ಕಾರ್ಯ : ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 11 ಲಕ್ಷ ಸಸಿಗಳನ್ನು ನೆಟ್ಟಿದ್ದು, ಅವುಗಳಲ್ಲಿ ಶೇ.80ರಷ್ಟು ಸಸಿಗಳು ಬದುಕುಳಿದಿವೆ ಎಂದು ಖಂಡ್ರೆ ತಿಳಿಸಿದರು. ನೆಟ್ಟ ಸಸಿಗಳಿಗೆ ಐದು ವರ್ಷಗಳ ಕಾಲ ಸಮರ್ಪಕ ನೀರು ಮತ್ತು ಸಂರಕ್ಷಣೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕ್ರಮ: ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯವೂ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಮಾತ್ರವೇ ಸುಮಾರು 250 ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲಾಗಿದೆ ಎಂದು ಸಚಿವರು ಹೇಳಿದರು. ಸುಮಾರು 10,000 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಈಗಾಗಲೇ ಮುಕ್ತಗೊಳಿಸಲಾಗಿದ್ದು, ಹಂತ ಹಂತವಾಗಿ ಇನ್ನಷ್ಟು ಅರಣ್ಯ ಹಾಗೂ ಕಂದಾಯ ಭೂಮಿ ಒತ್ತುವರಿ ತೆರವು ಮಾಡಲಾಗುವುದು ಎಂದರು.

ಸಾರ್ವಜನಿಕರ ವೀಕ್ಷಣೆಗೆ ಸಮಯ ಮತ್ತು ಟಿಕೆಟ್ ದರ : ಮೃಗಾಲಯವು ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಿದೆ. ಪ್ರತಿ ಮಂಗಳವಾರ ರಜೆ ಇರಲಿದೆ. ಟಿಕೆಟ್ ದರವನ್ನು 12 ವರ್ಷ ಮೇಲ್ಪಟ್ಟವರಿಗೆ 75 ರೂ., 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 40 ರೂ. ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 25 ರೂ. ಎಂದು ನಿಗದಿಪಡಿಸಲಾಗಿದೆ.

ಗಣ್ಯರ ಉಪಸ್ಥಿತಿ : ಕಾರ್ಯಕ್ರಮದಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ. ರಂಗಸ್ವಾಮಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.