ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಬಿಜೆಪಿ ಯುವ ಮೋರ್ಚಾ ಮುಖಂಡರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜ್ವಲಗೌಡ ಪಾಟೀಲ ಎಂಬ ಹೆಸರಿನಲ್ಲಿ ಪೋಸ್ಟ್ ಪ್ರಕಟವಾಗಿದ್ದು, ಈ ಸಂಬಂಧ ದಾಖಲೆಗಳ ಸಹಿತ ಮಹಾನಗರ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹೆಬಸೂರ ದೂರು ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಮಂಜುನಾಥ ಹೆಬಸೂರ, ಕಬ್ಬು ಬೆಳೆಗಾರರ ಹೋರಾಟಕ್ಕೆ ಎಲ್ಲರ ಬೆಂಬಲವಿದೆ. ಆದರೆ, ಈ ವಿಚಾರವನ್ನು ಮುಂದಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹರಿಬಿಡುವುದು ಸರಿಯಲ್ಲ. ಇಂತಹ ಕೃತ್ಯಗಳ ಹಿಂದೆ ವ್ಯವಸ್ಥಿತ ಪಿತೂರಿ ಇರುವ ಶಂಕೆಯಿದೆ ಎಂದು ಆರೋಪಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್ಗಳನ್ನು ಪ್ರಕಟಿಸುವವರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾವೇ ಕ್ರಮಕ್ಕೆ ಮುಂದಾಗಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರಾದ ರಾಜು ಬೆಟಗೇರಿ, ರೋಹಿನಿ ಬನ್ನೂರ, ಮೈನುದ್ದೀನ್, ಶಂಕರಗೌಡ ಪಾಟೀಲ, ಶ್ರೀಧರಸಿಂಗ್, ಮಿಥುನ ಡಿಕೆ, ವಿನಾಯಕ ಹಳೇಮನಿ, ಅಜಿತಕುಮಾರ, ವಿಜಯ ಹಿರೇಮಠ ಹಾಗೂ ಭೂಪಾಲ ದೇವಕ್ಕಿ ಇತರರಿದ್ದರು.






















