ದಾವಣಗೆರೆ: ಚೀಟಿ ಅವಧಿ ಮುಕ್ತಾಯವಾದರೂ ಹಣ ಮರುಪಾವತಿಸದೆ ಸೇವಾ ನ್ಯೂನತೆ ಎಸಗಿದ ಜಿಲ್ಲೆಯ ಚನ್ನಗಿರಿಯ ನಿತ್ಯೋತ್ಸವ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಭಾರೀ ದಂಡ ವಿಧಿಸಿದೆ.
ಚನ್ನಗಿರಿಯ ಜಬೀನ್ ಖಾನಂ ಎಂಬುವರು ಸದರಿ ಸಂಸ್ಥೆಯಲ್ಲಿ 50 ಲಕ್ಷ ರೂ. ಮೊತ್ತದ ಚೀಟಿಗೆ ಮಾಸಿಕ 2 ಲಕ್ಷ ರೂ.ಗಳಂತೆ 25 ಕಂತುಗಳನ್ನು ಪಾವತಿಸಿದ್ದರು. ಚೀಟಿ ಮುಕ್ತಾಯದ ನಂತರ ಹಣ ನೀಡದ ಸಂಸ್ಥೆಯ ವಿರುದ್ಧ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ ಹಾಗೂ ಸದಸ್ಯ ಸಿ.ಎಸ್. ತ್ಯಾಗರಾಜನ್, ದೂರುದಾರರಿಗೆ 50 ಲಕ್ಷ ರೂ. ಅಸಲು ಹಣವನ್ನು ಶೇ. 9ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಆದೇಶಿಸಿದ್ದಾರೆ. ಇದರ ಜೊತೆಗೆ ಮಾನಸಿಕ ನೋವು ಮತ್ತು ದೂರು ವೆಚ್ಚಕ್ಕಾಗಿ 35,000 ರೂ. ಪರಿಹಾರವನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಸಂಸ್ಥೆಯ ಮುಖ್ಯ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.






















