SK Home Ad
Home ಸುದ್ದಿ ದೇಶ ರೈಲು ಪ್ರಯಾಣಿಕರೇ ಗಮನಿಸಿ: ಸಹಪ್ರಯಾಣಿಕರಿಗೆ ಕಿರಿಕಿರಿ ಮಾಡಿದರೆ ಬೀಳಲಿದೆ ಭಾರಿ ದಂಡ!

ರೈಲು ಪ್ರಯಾಣಿಕರೇ ಗಮನಿಸಿ: ಸಹಪ್ರಯಾಣಿಕರಿಗೆ ಕಿರಿಕಿರಿ ಮಾಡಿದರೆ ಬೀಳಲಿದೆ ಭಾರಿ ದಂಡ!

0
223

ರೈಲಿನಲ್ಲಿ ಸ್ಪೀಕರ್‌ನಲ್ಲಿ ಜೋರಾಗಿ ಮಾತನಾಡಿದರೆ ₹1,000 ದಂಡ? ಮರುಕಳಿಸಿದರೆ ಜೈಲು ಶಿಕ್ಷೆಯೂ ಸಾಧ್ಯ!

ನವದೆಹಲಿ: ರೈಲು ಪ್ರಯಾಣದ ವೇಳೆ ಮೊಬೈಲ್ ಫೋನ್‌ನಲ್ಲಿ ಜೋರಾಗಿ ಮಾತನಾಡುವುದು, ಸ್ಪೀಕರ್ ಮೋಡ್‌ನಲ್ಲಿ ಹಾಡುಗಳನ್ನು ಕೇಳುವುದು ಅಥವಾ ವಿಡಿಯೋಗಳನ್ನು ಧ್ವನಿವರ್ಧಕದಲ್ಲಿ ವೀಕ್ಷಿಸಿ ಸಹಪ್ರಯಾಣಿಕರಿಗೆ ತೊಂದರೆ ಉಂಟುಮಾಡುವವರಿಗೆ ದಂಡ ವಿಧಿಸುವ ಬಗ್ಗೆ ದಕ್ಷಿಣ ರೈಲ್ವೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮೊದಲ ಹಂತದಲ್ಲಿ ₹1,000 ವರೆಗೆ ದಂಡ ವಿಧಿಸುವುದರ ಜತೆಗೆ, ಎಚ್ಚರಿಕೆ ನೀಡಿದ ಬಳಿಕವೂ ಅದೇ ವರ್ತನೆಯನ್ನು ಮುಂದುವರಿಸಿದರೆ ₹5,000 ವರೆಗೆ ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ.

ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಮೊಬೈಲ್ ಫೋನ್‌ನ ಸ್ಪೀಕರ್ ಮೂಲಕ ಜೋರಾಗಿ ಸಂಗೀತ, ವಿಡಿಯೋ, ರೀಲ್ಸ್ ಅಥವಾ ಇತರ ಆಡಿಯೊಗಳನ್ನು ಪ್ರಸಾರ ಮಾಡುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆ ಈ ಕ್ರಮ ಕೈಗೊಂಡಿದೆ.

ಇತ್ತಿಚೆಗೆ ಹೊರಡಿಸಿದ ಸೂಚನೆಯ ಪ್ರಕಾರ, ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಕಟಣೆಗಳ ಮೂಲಕ ಹಾಗೂ ಸೂಚನಾ ಫಲಕಗಳ ಮೂಲಕ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ವಿಭಾಗೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರಾದೇಶಿಕ ಭಾಷೆಗಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟಣೆ ನೀಡುವಂತೆಯೂ ಸೂಚಿಸಲಾಗಿದೆ. ಈ ಕ್ರಮಗಳ ಅನುಷ್ಠಾನದ ವರದಿಯನ್ನು ಅಕ್ಟೋಬರ್ 20ರೊಳಗೆ ಸಲ್ಲಿಸಲು ತಿಳಿಸಲಾಗಿದೆ.

ಯಾವ ವರ್ತನೆಗೆ ದಂಡ ವಿಧಿಸಬಹುದು?

♫ ಸ್ಪೀಕರ್‌ನಲ್ಲಿ ಜೋರಾಗಿ ಹಾಡು ಅಥವಾ ವಿಡಿಯೋ: ಇತರ ಪ್ರಯಾಣಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಧ್ವನಿ ಪ್ರಸಾರ ಮಾಡುವುದು.

📲ಜೋರಾಗಿ ಫೋನ್‌ನಲ್ಲಿ ಮಾತನಾಡುವುದು: ರೈಲು ಬೋಗಿ ಅಥವಾ ನಿಲ್ದಾಣದಲ್ಲಿ ಸಹಪ್ರಯಾಣಿಕರಿಗೆ ಅಡಚಣೆಯಾಗುವಂತೆ ಸಂಭಾಷಣೆ ನಡೆಸುವುದು.

📵 ಎಚ್ಚರಿಕೆಯ ನಂತರವೂ ಮುಂದುವರಿಸುವುದು: ಅಧಿಕೃತ ರೈಲ್ವೆ ಸಿಬ್ಬಂದಿ ನಿಲ್ಲಿಸುವಂತೆ ಸೂಚಿಸಿದರೂ ಅದೇ ವರ್ತನೆಯನ್ನು ಮುಂದುವರಿಸಿದರೆ ಕಠಿಣ ಕ್ರಮ ಎದುರಾಗಬಹುದು.

ರೈಲ್ವೆ ನಿಯಮಗಳ ಅಡಿಯಲ್ಲಿ ಇಂತಹ ಉಪದ್ರವಕಾರಿ ವರ್ತನೆಗೆ ₹1,000 ವರೆಗೆ ದಂಡ ವಿಧಿಸಬಹುದು. ಅಧಿಕೃತ ಸಿಬ್ಬಂದಿಯ ಸೂಚನೆಯ ನಂತರವೂ ಅದನ್ನು ಮುಂದುವರಿಸಿದರೆ ಆರು ತಿಂಗಳವರೆಗೆ ಸರಳ ಜೈಲು ಶಿಕ್ಷೆ ಅಥವಾ ₹5,000 ವರೆಗೆ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ. ಪ್ರಕರಣದ ಪರಿಸ್ಥಿತಿ ಮತ್ತು ಅನ್ವಯಿಸುವ ಕಾನೂನು ಪ್ರಕಾರ ಕ್ರಮ ನಿರ್ಧಾರವಾಗುತ್ತದೆ.

ಪ್ರಯಾಣಿಕರು ಏನು ಮಾಡಬೇಕು? : ರೈಲು ಪ್ರಯಾಣದ ವೇಳೆ ಮೊಬೈಲ್‌ನಲ್ಲಿ ವಿಡಿಯೋ ಅಥವಾ ಹಾಡುಗಳನ್ನು ವೀಕ್ಷಿಸಲು ಇಯರ್‌ಫೋನ್ ಬಳಸುವುದು ಉತ್ತಮ. ಫೋನ್‌ನ ರಿಂಗ್‌ಟೋನ್ ಧ್ವನಿಯನ್ನು ಕಡಿಮೆ ಇಟ್ಟು, ಇತರರಿಗೆ ತೊಂದರೆಯಾಗದಂತೆ ಸಂಭಾಷಣೆ ನಡೆಸಬೇಕು. ಸಹಪ್ರಯಾಣಿಕರಿಗೆ ತೊಂದರೆ ಉಂಟಾಗುವ ವರ್ತನೆ ಕಂಡುಬಂದರೆ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಬಹುದು.