Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು ಮಳೆಯ ರುದ್ರನರ್ತನ: ಗೋಡೆ ಕುಸಿದು 7 ಸಾವು

ಬೆಂಗಳೂರು ಮಳೆಯ ರುದ್ರನರ್ತನ: ಗೋಡೆ ಕುಸಿದು 7 ಸಾವು

0
113

ಬೆಂಗಳೂರು: ನಗರದಲ್ಲಿ ಇಂದು ಸಂಜೆ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆ ದಿಢೀರ್ ದುರಂತಕ್ಕೆ ಕಾರಣವಾಗಿದ್ದು, ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿಯ ಗೋಡೆ (ಕಾಂಪೌಂಡ್) ಕುಸಿದು 7 ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಸುಮಾರು ಅರ್ಧಗಂಟೆ ಮಾತ್ರ ಸುರಿದ ಮಳೆಯೇ ರುದ್ರರೂಪ ತಾಳಿ, ಶಿವಾಜಿನಗರ ಪ್ರದೇಶದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಯಿತು. ಮೃತರಲ್ಲಿ ಇಬ್ಬರು ಪುರುಷರು ಹಾಗೂ ಐವರು ಮಹಿಳೆಯರು ಸೇರಿದ್ದಾರೆ. ಪಾದಚಾರಿಗಳು ಹಾಗೂ ಬೀದಿ ವ್ಯಾಪಾರಿಗಳೂ ಮೃತರಲ್ಲಿರಬಹುದು ಎಂದು ಶಂಕಿಸಲಾಗಿದೆ.

ದುರಂತ ಹೇಗೆ ನಡೆಯಿತು? : ಮಾಹಿತಿ ಪ್ರಕಾರ, ಬೌರಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಹೊರಭಾಗದಲ್ಲಿ ಬೀದಿಬದಿ ವ್ಯಾಪಾರಿಗಳು ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಸುಮಾರು 8 ಅಡಿ ಎತ್ತರದ ಕಾಂಪೌಂಡ್ ಗೋಡೆಗೆ ಟಾರ್ಪಾಲ್ ಹಾಕಿಕೊಂಡು ಮಳೆ ತಪ್ಪಿಸಲು ಜನರು ನಿಂತಿದ್ದರು. ಈ ವೇಳೆ ಬಿರುಗಾಳಿ ಸಹಿತ ಸುರಿದ ಮಳೆಗೆ ಗೋಡೆ ಏಕಾಏಕಿ ಕುಸಿದು ಬಿದ್ದು, ಅಲ್ಲಿ ಆಶ್ರಯ ಪಡೆದಿದ್ದವರು ಅವಶೇಷಗಳಡಿ ಸಿಲುಕಿದರು. ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ರಕ್ಷಣಾ ಕಾರ್ಯ ಆರಂಭಿಸಿ ಕೆಲವರನ್ನು ಹೊರತೆಗೆದರು.

ರಕ್ಷಣಾ ಕಾರ್ಯ, ಗಾಯಾಳುಗಳಿಗೆ ಚಿಕಿತ್ಸೆ : ಗೋಡೆ ಕುಸಿತದ ನಂತರ ಸ್ಥಳಕ್ಕೆ ತುರ್ತು ಸೇವಾ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಭೇಟಿ, ಅಧಿಕಾರಿಗಳಿಗೆ ತರಾಟೆ : ಘಟನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಿಎಂ ಅಸಮಾಧಾನ ವ್ಯಕ್ತಪಡಿಸಿ, ನಿರ್ಲಕ್ಷ್ಯದ ಕುರಿತು ಸ್ಪಷ್ಟನೆ ಕೇಳಿದರು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮುಂದಿನ ಕೆಲವು ದಿನಗಳಲ್ಲೂ ಬೆಂಗಳೂರಿನಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.