ಬೆಂಗಳೂರು: ಬೆಕ್ಕು ಮರಿಹಾಕುವುದಕ್ಕೆ ಪಕ್ಕದ ಮನೆಯ ಗಂಡುಬೆಕ್ಕೇ ಕಾರಣ ಎಂದು ಆ ಮನೆಯವರು ಗಂಡುಬೆಕ್ಕು ಸಾಕಿದ ಪಕ್ಕದ ಮನೆಯವರ ಜತೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಆ್ಯಸಿಡ್ ಹಾಕುವ ಬೆದರಿಕೆ ನಗರದ ಶೇಷಾದ್ರಿಪುರಂನಲ್ಲಿ ನಡೆದಿದೆ. ಬೆಕ್ಕಿನ ಮರಿಗಳ ವಿಚಾರವಾಗಿ ಎರಡು ಕುಟುಂಬದ ನಡುವೆ ಜೋರಾದ ಜಗಳವಾಗಿ ಆ್ಯಸಿಡ್ ಎರಚುವ ವಿಚಾರವೂ ಪ್ರಸ್ತಾಪವಾಗಿ ಪೊಲೀಸರು ಮಧ್ಯ ಪ್ರವೇಶಿಸಿ ಪ್ರಕರಣ ಇತ್ಯರ್ಥಪಡಿಸಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರದ ಒಂದು ಮನೆಯಲ್ಲಿ ಹೆಣ್ಣುಬೆಕ್ಕು ನಾಲ್ಕು ಮರಿಗಳಿಗೆ ಜನ್ಮನೀಡಿತ್ತು. ಆ ಮನೆಯ ಮಾಲಿಕರಿಗೆ ತಮ್ಮ ಬೆಕ್ಕು ಮರಿಹಾಕಿದ್ದು ಇಷ್ಟವಿರಲಿಲ್ಲ. ಈ ಮರಿ ಹಾಕಲು ಪಕ್ಕದ ಮನೆಯ ಗಂಡುಬೆಕ್ಕೇ ಕಾರಣ ಎಂದು ಅವರ ಜತೆ ಮೊದಲು ಜಗಳ ತೆಗೆದಿದ್ದಾರೆ. ಜೋರಾದ ಕೂಗಾಟ,ಒದರಾಟ ನೋಡಿ ಆ ಪ್ರದೇಶದ ಜನರು ಅಲ್ಲಿಗೆ ಬಂದಿದ್ದಾರೆ. ನಂತರ ಎರಡೂ ಕುಟುಂಬದವರಿಗೆ ಸಮಾಧಾನ ಮಾಡಲು ಯತ್ನಿಸಿದ್ದಾರೆ.
ಆ ಬೆಕ್ಕುಗಳು ಪ್ರಕೃತಿ ನಿಯಮದಂತೆ ಸೇರಿವೆ. ಇದರಿಂದ ಹೆಣ್ಣು ಬೆಕ್ಕು ಮುದ್ದಾದನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಇದರಲ್ಲಿ ತಪ್ಪೇನು ಎಂದು ಕೇಳಿದ್ದಾರೆ. ಆದ್ರೆ ಹೆಣ್ಣುಬೆಕ್ಕು ಸಾಕಿದ ಮನೆಯವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಯಾವುದೇ ಕಾರಣಕ್ಕೆ ನಾವು ಬಿಡುವುದಿಲ್ಲ. ಮರಿಹಾಕಲು ಇವರ ಗಂಡುಬೆಕ್ಕೇ ಕಾರಣ ಎಂದು ಮತ್ತಷ್ಟು ಕೂಗಾಡಿದ್ದಾರೆ. ಗಂಡು ಬೆಕ್ಕು ಸಾಕಿದವರೂ ಸಹ ನಮ್ಮ ಬೆಕ್ಕಿನದೇನೂ ತಪ್ಪಿಲ್ಲ ಎಂದು ಹೇಳಲು ಯತ್ನಿಸಿದ್ದಾರೆ. ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಒಂದು ಹಂತದಲ್ಲಿ ಬೆಕ್ಕಿನ ಮರಿಗಳಿಗೆ ಆಸಿಡ್ ಹಾಕುವುದಾಗಿ ಹೆಣ್ಣುಬೆಕ್ಕು ಸಾಕಿದವರು ಬೆದರಿಸಿದ್ದಾರೆ.
ಇದು ಹೀಗೆಯೇ ಮುಂದುವರಿದರೆ ಅನಾಹುತವಾದೀತು ಎಂದು ಗಂಡು ಬೆಕ್ಕು ಸಾಕಿದವರು 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರ ಅಹವಾಲು ಆಲಿಸಿದ್ದಾರೆ. ಹೆಣ್ಣು ಬೆಕ್ಕು ಮರಿ ಹಾಕುವುದು ಸಾಮಾನ್ಯ. ಇದು ಪ್ರಕೃತಿದತ್ತವಾದುದು. ಅದಕ್ಕಾಗಿ ಗಲಾಟೆ ಮಾಡುವುದು ಏಕೆ ಎಂದು ತಿಳಿಸಿದರೂ ಹೆಣ್ಣು ಬೆಕ್ಕು ಸಾಕಿದವರು ಮಾತ್ರ ನಮಗೆ ಈ ಮರಿಗಳು ಬೇಕಾಗಿಲ್ಲ.
ಅವರ ಗಂಡು ಬೆಕ್ಕಿನಿಂದಲೇ ಮರಿಗಳು ಆಗಿವೆ. ಆದ್ದರಿಂದ ಅವರಿಗೇ ಈ ಮರಿಗಳು ಸೇರಬೇಕು ಎಂದು ವಾದ ಮಾಡಿದ್ದಾರೆ. ಇದಕ್ಕೆ ಗಂಡು ಬೆಕ್ಕು ಸಾಕಿದವರು ನಿರಾಕರಿಸಿ, ಮರಿ ಹಾಕಿರುವುದು ಅವರ ಬೆಕ್ಕು. ಎಂದ ಮೇಲೆ ಅವರಿಗೆ ಸೇರಬೇಕು. ಎಂದು ಪಟ್ಟು ಹಿಡಿದಿದ್ದಾರೆ.






















