SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಸಿದ್ದರಾಮಯ್ಯ ಕೆಳಗಿಳಿಸಿದ್ದು ಕಾಂಗ್ರೆಸ್ ಪತನಕ್ಕೆ ನಾಂದಿ

ಸಿದ್ದರಾಮಯ್ಯ ಕೆಳಗಿಳಿಸಿದ್ದು ಕಾಂಗ್ರೆಸ್ ಪತನಕ್ಕೆ ನಾಂದಿ

0
161

ಬೆಳಗಾವಿ: `ಕಾಂಗ್ರೆಸ್ ಹೈಕಮಾಂಡ್ ನೇರವಾಗಿ ಜೇನುಗೂಡಿಗೆ ಕೈ ಹಾಕಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಮೂಲಕ ರಾಜ್ಯದ ರಾಜಕೀಯ ಪರಿಸ್ಥಿತಿ ಹದಗೆಡಿಸಿದೆ. ಸಿದ್ದರಾಮಯ್ಯ ಅವರ ಕಣ್ಣೀರು 2028ರ ಚುನಾವಣೆಯಲ್ಲಿ ಜ್ವಾಲಾಮುಖಿಯಾಗಿ ಸ್ಫೋಟಿಸಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ‘ಸಿದ್ದರಾಮಯ್ಯ ಅವರ ರಾಜೀನಾಮೆ ಕಾಂಗ್ರೆಸ್ ಪತನಕ್ಕೆ ಕಾರಣವಾಗಲಿದೆ. ರಾಜ್ಯವೂ ಅಧಃಪತನದತ್ತ ಸಾಗಲಿದೆ. ಅಹಿಂದ ಚಳವಳಿಯನ್ನೇ ಕಾಂಗ್ರೆಸ್ ಹೈಕಮಾಂಡ್ ತುಳಿದು ಹಾಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳನ್ನು ಶಿಸ್ತಿನಿಂದ ಜಾರಿಗೊಳಿಸಿದ್ದರು. ರಾಜ್ಯದ ಆರ್ಥಿಕತೆಗೆ ತೊಂದರೆಯಾಗದಂತೆ ಅವುಗಳನ್ನು ನಿಭಾಯಿಸಿದ್ದರು. ಆದರೆ, ಇನ್ನು ಮುಂದೆ ಗ್ಯಾರಂಟಿ ಯೋಜನೆಗಳು ಮುಂದುವರಿಯುವ ಬಗ್ಗೆ ಅನುಮಾನವಿದೆ. ಕಾಂಗ್ರೆಸ್ ನಾಯಕರಾದ ವೇಣುಗೋಪಾಲ ಹಾಗೂ ಸುರ್ಜೇವಾಲಾ ಅವರಿಗೆ ರಾಜ್ಯದ ನಿಜವಾದ ಸಮಸ್ಯೆಗಳ ಅರಿವಿಲ್ಲ. ತಾವೇ ಹೋರಾಟ ಮಾಡಿ ಸರ್ಕಾರ ತಂದಂತೆ ವರ್ತಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘2028ರ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 40 ಸ್ಥಾನಗಳನ್ನೂ ಗೆಲ್ಲಲು ಸಾಧ್ಯವಾಗುವುದಿಲ್ಲ. ಸಿದ್ದರಾಮಯ್ಯ ಅವರು ಐದು ವರ್ಷ ಪೂರೈಸಿ ಚುನಾವಣೆಗೆ ಹೋಗಬೇಕಾಗಿತ್ತು. ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದರು. ಹಿರಿಯ ನಾಯಕರಿಗೂ ಸಚಿವ ಸ್ಥಾನಗಳಿದ್ದವು. ಆದರೂ ಇಂತಹ ನಿರ್ಧಾರ ಕೈಗೊಂಡಿರುವುದು ಪಕ್ಷಕ್ಕೆ ಭಾರಿ ಹಾನಿ ತರಲಿದೆ’ ಎಂದರು.

ಬಿಜೆಪಿಯ ಉದಾಹರಣೆ ನೀಡಿದ ಅವರು, ‘ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ ಪರಿಣಾಮವನ್ನು ಬಿಜೆಪಿ ಇನ್ನೂ ಎದುರಿಸುತ್ತಿದೆ. ಅದೇ ಪರಿಸ್ಥಿತಿ ಮುಂದೆ ಕಾಂಗ್ರೆಸ್‌ಗೂ ಬರಲಿದೆ. ಜನಮಾನಸದಲ್ಲಿ ನೆಲೆಸಿರುವ ‘ಮಾಸ್ ಲೀಡರ್’ ಒಬ್ಬರನ್ನು ಅಧಿಕಾರದಿಂದ ಕಿತ್ತೊಗೆಯುವುದನ್ನು ಜನರು ಸಹಿಸುವುದಿಲ್ಲ’ ಎಂದು ಹೇಳಿದರು.

‘ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಅಹಿಂದ ಮತಗಳೇ ಕಾರಣ. ಈಗ ಅಹಿಂದ ನಾಯಕನನ್ನೇ ತುಳಿದಿದ್ದಾರೆ. ಕುರುಬ ಸಮಾಜ ಇದನ್ನು ಎಂದಿಗೂ ಕ್ಷಮಿಸಬಾರದು. ತಕ್ಕ ಪಾಠ ಕಲಿಸಬೇಕು’ ಎಂದು ಲಖನ್ ಜಾರಕಿಹೊಳಿ ಕರೆ ನೀಡಿದರು.