Home Advertisement
Home ಸಿನಿ ಮಿಲ್ಸ್ ಕಿರುತೆರೆಯ ‘ಹಿಟ್ಲರ್’ ಇನ್ನಿಲ್ಲ: ಅಪ್ಪು, ಚಿರು ಹಾದಿಯಲ್ಲೇ ಸಾಗಿದ ನಟ ದಿಲೀಪ್ ರಾಜ್ ಅಕಾಲಿಕ ಮರಣ!

ಕಿರುತೆರೆಯ ‘ಹಿಟ್ಲರ್’ ಇನ್ನಿಲ್ಲ: ಅಪ್ಪು, ಚಿರು ಹಾದಿಯಲ್ಲೇ ಸಾಗಿದ ನಟ ದಿಲೀಪ್ ರಾಜ್ ಅಕಾಲಿಕ ಮರಣ!

0
74

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ಯಶಸ್ವಿ ನಿರ್ಮಾಪಕ ದಿಲೀಪ್ ರಾಜ್ (47) ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಮತ್ತು ಚಿರಂಜೀವಿ ಸರ್ಜಾ ಇವರುಗಳ ಸಾಲಿಗೆ ಈಗ ದಿಲೀಪ್ ರಾಜ್ ಸೇರ್ಪಡೆಯಾಗಿರುವುದು ಕನ್ನಡಿಗರಿಗೆ ಮತ್ತು ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ತೀವ್ರ ನೋವು ಉಂಟುಮಾಡಿದೆ.

ಹೌದು.. ಮನೆಯಲ್ಲಿದ್ದ ಸಂದರ್ಭದಲ್ಲಿ ದಿಲೀಪ್ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಟ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕೇವಲ 47 ವರ್ಷ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಅಭಿಮಾನಿಗಳಲ್ಲಿ ಆತಂಕ ಮತ್ತು ವಿಷಾದ ಮೂಡಿಸಿದೆ.

ನಟ, ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತಿ ಪಡೆದು, ಕಷ್ಟಪಟ್ಟು ಚಿತ್ರರಂಗಕ್ಕೂ ಬಂದ ದಿಲೀಪ್ ರಾಜ್, 2005ರಲ್ಲಿ ‘ಬಾಯ್ ಫ್ರೆಂಡ್’ ಸಿನಿಮಾ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಮಿಲನ’ದಲ್ಲಿನ ನಟನೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ನಂತರ ‘ಯು-ಟರ್ನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದರು.

ಹಾಗೇ ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ದಿಲೀಪ್ ದೊಡ್ಡ ಹೆಸರು ಮಾಡಿದ್ದರು. ಇತ್ತೀಚೆಗೆ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಎಜೆ (ಅಭಿನವ್ ಜಗನ್ನಾಥ್) ಪಾತ್ರದ ಮೂಲಕ ಮನೆಮಾತಾಗಿದ್ದರು. ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದ ನಟ, ‘ಪಾರು’, ‘ನಾ ನಿನ್ನ ಬಿಡಲಾರೆ’ ಇಂತಹ ಜನಪ್ರಿಯ ಧಾರಾವಾಹಿಗಳನ್ನು ನಿರ್ಮಿಸಿದ್ದರು.

ಒಟ್ಟಾರೆ.. ಪ್ರತಿಭಾವಂತ ಕಲಾವಿದನ ಅಕಾಲಿಕ ನಿರ್ಗಮನಕ್ಕೆ ಸ್ಯಾಂಡಲ್‌ವುಡ್ ಗಣ್ಯರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಹೆಸರಾಂತ ನಟ ದಿಲೀಪ್‌ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ.