ಚಿತ್ರ: ಕರಾವಳಿ
ನಿರ್ದೇಶನ: ಗುರುದತ್ ಗಾಣಿಗ
ನಿರ್ಮಾಣ: ಗಾಣಿಗ ಫಿಲಂಸ್ ಹಾಗೂ ವಿಕೆ ಫಿಲಂ ಅಸೋಸಿಯೇಷನ್
ತಾರಾಗಣ: ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರಾ, ರಮೇಶ್ ಇಂದಿರಾ, ಶ್ರೀಧರ್, ಸಂಪದಾ ಹಾಗೂ ಸುಷ್ಮಿತಾ.
ರೇಟಿಂಗ್ಸ್: 3.5
ಗಣೇಶ್ ರಾಣೆಬೆನ್ನೂರು
ಆ ಊರಿನಲ್ಲಿ ಕಂಬಳ ನಡೆದು ಬರೋಬ್ಬರಿ ಮೂವತ್ತು ವರ್ಷಗಳೇ ಉರುಳಿರುತ್ತದೆ. ಕಂಬಳದ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೋ ಅವರಿಗೆ ಸಿಂಹಾಸನ ಮತ್ತು ರಾಜಮರ್ಯಾದೆ. ಅದಕ್ಕಾಗಿ ಇನ್ನಿಲ್ಲದ ಹಗ್ಗಜಗ್ಗಾಟ, ಮಸಲತ್ತು, ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ನಿತ್ಯ ನಿರಂತರವಾಗಿರುತ್ತದೆ. ಇವೆಲ್ಲವನ್ನೂ ಮೀರಿ ಇನ್ನೇನು ಗೆಲ್ಲುವ ಹಂತಕ್ಕೆ ಹೋದ ‘ಮಾವೀರ’, ಮಣ್ಣು ಸೇರುತ್ತಾನೆ. ಆನಂತರ ‘ಕೋಟಿ ಚೆನ್ನಯ್ಯ ಕಂಬಳ’ಕ್ಕೆ ಬ್ರೇಕ್!
ಭರ್ತಿ ಮೂವತ್ತು ವರ್ಷದ ನಂತರ ಅದಕ್ಕೊಂದು ದಿವ್ಯಕಳೆ, ಸಿಂಗಾರಗೊಂಡ ರಥಬೀದಿ, ಊರಿನ ಜನರಲ್ಲಿ ಭೀತಿಯ ನಡುವೆ ಖುಷಿಯ ಹೊಯ್ದಾಟ… ಆದರೆ ಈ ಬಾರಿ ಏನೆಲ್ಲ ರಂಪಾಟಗಳು ನಡೆಯಬಹುದು… ಮೂರು ದಶಕದ ವೈರತ್ವಕ್ಕೆ, ಕುರ್ಚಿಯ ಕಾದಾಟಕ್ಕೆ ನೆತ್ತರ ಕೋಡಿ ಹರಿಯುತ್ತಾ ಎಂಬುದು ಸಿನಿಮಾದ ಒಟ್ಟಾರೆ ಕಥೆ-ಚಿತ್ರಕಥೆ.
ಕರಾವಳಿಯ ಸಂಸ್ಕೃತಿ, ಆಚರಣೆ, ಕ್ರೀಡಾಸ್ಪರ್ಧೆ ಮತ್ತು ಅಲ್ಲಿನ ಜನರ ಸ್ಫೂರ್ತಿಯನ್ನು ಸಾಧ್ಯವಾದಷ್ಟೂ ಸಹಜವಾಗಿಯೇ ಕಟ್ಟಿಕೊಡಲು ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಗುರುದತ್ ಗಾಣಿಗ. ಕಂಬಳವೇ ಪ್ರಧಾನ ಅಂಶವಾದರೂ, ಅದರ ಹಿಂದಿನ ಸಂಚು, ತಯಾರಿ, ಒಳ ರಾಜಕೀಯ ಹಾಗೂ ಗುದ್ದಾಟ-ಸೆಣಸಾಟಗಳನ್ನು ತೆರೆದಿಟ್ಟಿದ್ದಾರೆ. ಕೇವಲ ಕಂಬಳದ ಹಿಂದೆ ಓಡದೇ, ಅದರ ಹಿಂದಿನ ಚಿತ್ರಣವನ್ನು ಸೊಗಸಾಗಿ ಹರವಿಟ್ಟಿರುವುದು ಗುರುದತ್ ಕ್ರಿಯಾಶೀಲತೆಗೆ ಸಾಕ್ಷಿ.
ಇಡೀ ಸಿನಿಮಾದಲ್ಲಿ ಕಲಾವಿದರು ಎಷ್ಟು ಪ್ರಮುಖ ಪಾತ್ರ ನಿರ್ವಹಿಸುತ್ತಾರೋ, ತಾಂತ್ರಿಕ ಬಳಗವೂ ಅಷ್ಟೇ ಗಮನ ಸೆಳೆಯುತ್ತದೆ. ಪ್ರತಿ ದೃಶ್ಯದಲ್ಲೂ ಕ್ಯಾಮೆರಾ ಮೂಲಕ ಮ್ಯಾಜಿಕ್ ಮಾಡಿರುವ ಅಭಿಮನ್ಯು ಸದಾನಂದ, ಹಿನ್ನೆಲೆ ಸಂಗೀತದಲ್ಲಿ ಕಿವಿಗಳನ್ನು ಸದಾ ಚುರುಕುಗೊಳಿಸುವ ಮಾಂತ್ರಿಕ ಸಚಿನ್ ಬಸ್ರೂರು ಸಿನಿಮಾವನ್ನು ಮತ್ತಷ್ಟು ಚೆಂದಗೊಳಿಸಲು ಸಹಕರಿಸಿದ್ದಾರೆ.
ಪ್ರಜ್ವಲ್ ದೇವರಾಜ್ ಮಾತು ಕಡಿಮೆಯಾದರೂ, ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಜ್ ಬಿ ಶೆಟ್ಟಿ ಇದ್ದಷ್ಟು ಹೊತ್ತು ಗಮನ ಸೆಳೆಯುತ್ತಾರೆ. ಮಹಾಬಲನಾಗಿ ಮಿತ್ರಾ ಸಿನಿಮಾ ಪೂರ್ತಿ ಆವರಿಸಿಕೊಂಡಿದ್ದಾರೆ. ರಮೇಶ್ ಇಂದಿರಾ, ಶ್ರೀಧರ್, ಸಂಪದಾ ಹಾಗೂ ಸುಷ್ಮಿತಾ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.






















