ಬೆಂಗಳೂರು, ಜುಲೈ 23: ಪ್ರೇಕ್ಷಕರಿಗೆ ಸದಾ ಹೊಸತನದ ಹಾಗೂ ನಿರಂತರ ಮನರಂಜನೆ ನೀಡುತ್ತಾ ಬಂದಿರುವ ಕಲರ್ಸ್ ಕನ್ನಡ ವಾಹಿನಿಯು ತನ್ನ ವಾರಾಂತ್ಯದ ಸಿನಿಮಾ ಮನರಂಜನೆಯನ್ನು ಮತ್ತಷ್ಟು ರಂಗೇರಿಸುತ್ತಿದೆ. ನಟ ಜೈದ್ ಖಾನ್ ನಾಯಕನಾಗಿ ನಟಿಸಿರುವ ರೋಮ್ಯಾಂಟಿಕ್, ಮ್ಯೂಸಿಕಲ್ ಹಾಗೂ ಬ್ಲಾಕ್ ಬಸ್ಟರ್ ಸಿನಿಮಾ ಕಲ್ಟ್ (Cult) ಇದೇ ಮೊದಲ ಬಾರಿಗೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ (World Television Premiere) ನಲ್ಲಿ ಜುಲೈ 26 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
‘ಮಾಧವ’ನ ಪಾತ್ರದಲ್ಲಿ ಅಭಿನಯಿಸಿರುವ ಜೈದ್ ಖಾನ್ ಪ್ರೀತಿಯಲ್ಲಿ ಸೋತು ಭಗ್ನ ಪ್ರೇಮಿಯಾಗಿ ಅನುಭವಿಸುವ ಯಾತನೆ ಭಾವನಾತ್ಮಕತೆಯಿಂದ ಕೂಡಿದೆ. ಜೆನ್-ಝೀ ಯುವಕರ ಇಷ್ಟ, ಅವರ ಪ್ರೀತಿಯ ರೀತಿ, ವಿರಹದ ಕಥಾಹಂದರವನ್ನು ಸಿನಿಮಾ ಹೊಂದಿದೆ. ಪ್ರೀತಿಯ ಬಲೆಯಲ್ಲಿ ಬಿದ್ದ ನಾಯಕ ಓದು ಬಿಟ್ಟು, ಕುಡಿತದ ದಾಸನಾಗುವುದು. ಪ್ರೀತಿಸಿದ ಹುಡುಗಿ ದೂರವಾದಾಗ ನಾಯಕನ ಬಾಳಲ್ಲಿ ಇತಿಹಾಸಿನಿ (ರಚಿತಾ) ಎಂಟ್ರಿ ಕೊಟ್ಟ ಬಳಿಕ ಆತನ ಜೀವನದಲ್ಲಾಗುವ ಬದಲಾವಣೆ.
ನಾಯಕ ಕೊನೆಗೆ ಯಾರ ಜೊತೆಯಾಗುತ್ತಾನೆ ಎಂಬ ಕುತೂಹಲ ಹುಟ್ಟಿಸುತ್ತಾ ಸಾಗುವ ಸಿನಿಮಾವೇ ʻಕಲ್ಟ್ʼ. ನಾಯಕ ತನ್ನಿಂದ ದೂರವಾದ ಗೀತಾಳ ಜೊತೆ ಸೇರುತ್ತಾನಾ? ಅಷ್ಟಕ್ಕೂ ಗೀತಾ ದೂರವಾಗೋದು ಏಕೆ? ಇತಿಹಾಸಿನಿ ಮತ್ತು ಮ್ಯಾಡಿ ಒಂದಾಗುತ್ತಾರಾ ಎಂಬುದಕ್ಕೆ ಚಿತ್ರವನ್ನು ನೋಡಲೇಬೇಕು. ನಟ ಜೈದ್ ಖಾನ್ ಇಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಲವರ್ ಬಾಯ್ ಆಗಿ ಮತ್ತೊಮ್ಮೆ ವೈಲೆಂಟ್ ಭಗ್ನಪ್ರೇಮಿಯಾಗಿ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ.
ಕಲ್ಟ್ ಕೇವಲ ಪ್ರೇಮಕಥೆಯಲ್ಲ: ಅದು ಕೆಲವು ಮಹತ್ವದ ಸಾಮಾಜಿಕ ಪ್ರಶ್ನೆಗಳನ್ನೂ ಎತ್ತುವ ಸಿನಿಮಾ. ಧೈರ್ಯವಾಗಿ ಬದುಕುವ ಮಹಿಳೆಯರನ್ನು ಸಮಾಜ ಎಷ್ಟು ಬೇಗ ತೀರ್ಪು ನೀಡುತ್ತದೆ, ಅವರ ನೋವು ಮತ್ತು ಮಾನಸಿಕ ಆಘಾತವನ್ನು ಹೇಗೆ ಕಡೆಗಣಿಸುತ್ತದೆ, ಹಾಗೂ ಪೋಷಕರ ನಿರೀಕ್ಷೆಗಳು ಮಕ್ಕಳ ಭಾವನಾತ್ಮಕ ನಿರ್ಧಾರಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಸಿನಿಮಾದಲ್ಲಿ ಹೇಳಲಾಗಿದೆ.
ಅನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಟ ಜೈದ್ ಖಾನ್, ನಟಿಯರಾದ ರಚಿತಾ ರಾಮ್ ಮತ್ತು ಮಲೈಕಾ ವಾಸುಪಾಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಷ್ಟೇ ಅಲ್ಲದೆ, ರಂಗಾಯಣ ರಘು, ಅಚ್ಯುತ್ ಕುಮಾರ್ ಮುಂತಾದ ದಿಗ್ಗಜ ನಟರ ತಾರಾಗಣ ಚಿತ್ರದಲ್ಲಿದೆ. ಕಿಶನ್ ಬಿಳಗಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮ್ಯೂಸಿಕ್ ಪ್ರೇಕ್ಷಕರಿಗೆ ಮುದ ನೀಡಲಿದೆ.
‘ಅಯ್ಯೋ ಶಿವನೇ’ ಹಾಗೂ ‘ಬ್ಲಡಿ ಲವ್’ ಹಾಡುಗಳು ಬಿಡುಗಡೆಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ದೊಡ್ಡ ಮಟ್ಟದಲ್ಲಿ ಟ್ರೆಂಡ್ ಸೃಷ್ಟಿಸಿದ್ದವು. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಯಶಸ್ವಿಯಾಗಿರುವ ಈ ಸಿನಿಮಾವನ್ನು ಮಿಸ್ ಮಾಡಿಕೊಳ್ಳದೆ ಈ ವಾರಾಂತ್ಯದಲ್ಲಿ ನಿಮ್ಮ ಇಡೀ ಕುಟುಂಬದೊಂದಿಗೆ ಕುಳಿತು ಆನಂದಿಸಿ. ಮನರಂಜನೆಯ ಮಹಾಪೂರವನ್ನೇ ಹರಿಸಲು ಬರುತ್ತಿರುವ ‘ಕಲ್ಟ್’ ಚಿತ್ರವನ್ನು ತಪ್ಪದೇ ವೀಕ್ಷಿಸಿ.






















