SK Home Ad
Home ಸುದ್ದಿ ರಾಜ್ಯ ಆಳಂದ ದರ್ಗಾ ಗಲಾಟೆ ಕೇಸ್ ವಾಪಸ್: ರಾಜ್ಯಪಾಲರ ಮೊರೆ ಹೋದ BJP

ಆಳಂದ ದರ್ಗಾ ಗಲಾಟೆ ಕೇಸ್ ವಾಪಸ್: ರಾಜ್ಯಪಾಲರ ಮೊರೆ ಹೋದ BJP

0
104

ಲಾಡ್ಲೆ ಮಶಾಕ್ ದರ್ಗಾ ಪ್ರಕರಣದ ಕೇಸ್ ಹಿಂಪಡೆಯುವ ಮೂಲಕ ಅಪರಾಧಿಗಳಿಗೆ ರಕ್ಷಣೆ: ಸರ್ಕಾರದ ವಿರುದ್ಧ ಬಿಜೆಪಿ ಆರೋಪ

ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದಿರುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಈ ಆದೇಶವನ್ನು ತಕ್ಷಣ ರದ್ದುಪಡಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಿಯೋಗ ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿತು. ಪ್ರಕರಣ ಹಿಂಪಡೆಯುವ ಮೂಲಕ ಗಂಭೀರ ಅಪರಾಧ ಪ್ರಕರಣಗಳಲ್ಲಿರುವ ಆರೋಪಿಗಳಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಬಿಜೆಪಿ ದೂರಿನಲ್ಲಿ ಆರೋಪಿಸಿದೆ.

ಬಿಜೆಪಿ ಮುಖಂಡರ ಪ್ರಕಾರ, ಆಳಂದದ ಲಾಡ್ಲೆ ಮಶಾಕ್ ದರ್ಗಾ ಪ್ರದೇಶದಲ್ಲಿ ಈ ಹಿಂದೆ ಕೋಮು ಉದ್ವಿಗ್ನತೆ ಸೃಷ್ಟಿಸಿದ ಘಟನೆಗಳು ನಡೆದಿದ್ದವು. ಶಿವಲಿಂಗಕ್ಕೆ ಅಪಮಾನ ಎಸಗಿದ ಆರೋಪ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ ಹಲವು ಗಂಭೀರ ಆರೋಪಗಳು ಪ್ರಕರಣದಲ್ಲಿ ದಾಖಲಾಗಿದ್ದವು. ಇಂತಹ ಪ್ರಕರಣಗಳನ್ನು ಹಿಂಪಡೆಯುವುದು ಕಾನೂನು ಸುವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಬಿಜೆಪಿ ವಾದಿಸಿದೆ.

ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ, ಪ್ರಕರಣ ಹಿಂಪಡೆಯುವ ಸಂಬಂಧ ಹೊರಡಿಸಿರುವ ಆದೇಶವನ್ನು ಸಂವಿಧಾನ ವಿರೋಧಿ ಹಾಗೂ ಜನವಿರೋಧಿ ಕ್ರಮವೆಂದು ಬಣ್ಣಿಸಿರುವ ಬಿಜೆಪಿ, ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಪ್ರಕರಣವನ್ನು ಮರುಪರಿಶೀಲಿಸಲು ಸೂಚಿಸುವಂತೆ ಕೋರಿದೆ.

ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, “ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಹಲವು ವರ್ಷಗಳಿಂದ ಶಿವಲಿಂಗವಿದ್ದು, ಈ ವಿಚಾರವಾಗಿ ಈ ಹಿಂದೆ ಅನೇಕ ಗಲಭೆಗಳು ನಡೆದಿವೆ. ಶಿವಲಿಂಗಕ್ಕೆ ಅಪಮಾನ ಎಸಗಿದ ಘಟನೆಗಳ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆದಿತ್ತು. ಇಂತಹ ಗಂಭೀರ ಪ್ರಕರಣಗಳು ನ್ಯಾಯಾಲಯದಲ್ಲಿದ್ದರೂ ಸರ್ಕಾರ ಅವುಗಳನ್ನು ಹಿಂಪಡೆದಿರುವುದು ಸರಿಯಲ್ಲ” ಎಂದು ಆರೋಪಿಸಿದರು.

ಪ್ರಕರಣ ಹಿಂಪಡೆಯುವ ಮೂಲಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಅವರು ದೂರಿದರು. ವೋಟ್ ಬ್ಯಾಂಕ್ ರಾಜಕಾರಣದ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ ಅವರು, ಪ್ರಕರಣವನ್ನು ಮರುತೆರೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಉಪನಾಯಕ ಸುನಿಲ್ ವಲ್ಯಾಪುರೆ, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ. ನಮೋಶಿ ಹಾಗೂ ಬಿ.ಜಿ. ಪಾಟೀಲ್, ಶಾಸಕ ಅವಿನಾಶ್ ಜಾಧವ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಆಳಂದ ದರ್ಗಾ ಪ್ರಕರಣವನ್ನು ಸರ್ಕಾರ ಹಿಂಪಡೆದಿರುವ ವಿಚಾರ ಈಗ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.